ಮಸೂದ್ ಅಜರ್ ನಿಷೇಧಕ್ಕೆ ಚೀನಾದ ಕೊಕ್ಕೆ

  ಪಾಕಿಸ್ತಾನದ ಜೈಶ್-ಎ-ಮುಹಮ್ಮದ್ (ಜೆಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ನನ್ನು “ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕ” ಎಂದು ಗುರುತಿಸಬೇಕು ಎಂಬ ಪ್ರಸ್ತಾವವನ್ನು ಮತ್ತೊಮ್ಮೆ ಚೀನಾ ವಿರೋಧಿಸಿದೆ. ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಭಯೋತ್ಪಾದನಾ ದಾಳಿ ನಡೆಸಿದ್ದು ಜೈಶ್ ಇ ಮಹಮ್ಮದ್ ಸಂಘಟನೆ. ಇದರಲ್ಲಿ 40ಕ್ಕಿಂತಲೂ ಹೆಚ್ಚು ಸಿಆರ್ ಪಿಎಫ್ ಭಾರತೀಯ ಯೋಧರನ್ನು ಹತ್ಯೆ ಮಾಡಲಾಗಿತ್ತು. ಇಂಡೋ-ಪಾಕ್ ಸಂಬಂಧ ಇದರಿಂದ ಮತ್ತಷ್ಟು ಹದಗೆಟ್ಟಿದೆ. ಅಜರ್ ನನ್ನು ನಿಷೇಧಿಸುವ ಕ್ರಮಕ್ಕೆ ಯುಎಸ್, ಬ್ರಿಟನ್ ಮತ್ತು ಫ್ರಾನ್ಸ್ ಕೂಡ ಬೇಡಿಕೆ ಇಟ್ಟಿತ್ತು. ಆದರೆ ಚೀನಾ ನಡೆದುಕೊಂಡಿರುವ ರೀತಿ ದೆಹಲಿಯ ನಿರಾಶೆಗೆ ಕಾರಣವಾಗಿದೆ.
ವಾಸ್ತವವಾಗಿ, ಚೀನಾವು ಪಾಕಿಸ್ತಾನದ ನಿಕಟ ಮಿತ್ರರಾಷ್ಟ್ರ ಮತ್ತು ಸಾಕಷ್ಟು ಲಾಭಗಳನ್ನೂ ಪಡೆದುಕೊಂಡಿದೆ. ಅಜರ್ ನನ್ನು ನಿಷೇಧಿಸಲು ಅಂತರ ರಾಷ್ಟ್ರೀಯ ಸಮುದಾಯವನ್ನು ಬೆಂಬಲಿಸಿದರೆ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಸಮಸ್ಯೆಗಳನ್ನು ಎದುರಿಸಬಹುದು ಎಂಬ ಆತಂಕ ಚೀನಾದ್ದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 
ಜೈಶ್ ಸಂಘಟನೆ ಬಗ್ಗೆ ಪಾಕಿಸ್ತಾನ ಮೊದಲಿನಿಂದಲೂ ಇಬ್ಬಗೆಯ ಮಾತನಾಡುತ್ತಿದೆ. ಭಾರತ ಪಾಕಿಸ್ತಾನದ ನೆಲದ ಮೇಲೆ ಮುನ್ನೆಚ್ಚರಿಕಾ ದಾಳಿಯನ್ನು ನಡೆಸಿದ ಬಳಿಕ ಅಲ್ಲಿನ ಸರ್ಕಾರ ಹಾಗೂ ಮಿಲಿಟರಿ ವ್ಯವಸ್ಥೆಯ ಪ್ರತಿಕ್ರಿಯೆಗಳಲ್ಲಿನ ವ್ಯತಿರಿಕ್ತತೆಯೇ ಎಲ್ಲವನ್ನೂ ಹೇಳುತ್ತದೆ. ಪಾಕ್ ಸೇನೆ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಜೈಶ್ ಸಂಘಟನೆ ಪಾಕಿಸ್ತಾನದಲ್ಲಿ ಇಲ್ಲವೇ ಇಲ್ಲ ಎಂದು ಹೇಳಿಕೆ ನೀಡಿದ್ದರು!  
ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಮೊದಲ ಬಾರಿಗೆ ಅಜರ್ ಇರುವಿಕೆ ಬಗ್ಗೆ ಒಪ್ಪಿಕೊಂಡ ನಂತರ ಸರ್ಕಾರ ಕೂಡ ಆತನೊಂದಿಗೆ ಸಂಪರ್ಕದಲ್ಲಿದೆ ಎಂದೂ ತಿಳಿಸಿದ್ದರು. ಖುರೇಷಿ ಅವರು ಮಸೂದ್ ಅಜರ್ “ಅಸ್ವಸ್ಥನಾಗಿದ್ದಾನೆ ಎಂದಿದ್ದರು. ಮನೆಯಿಂದ ಹೊರಬರಲು ಕೂಡ ಆಗುತ್ತಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದರು. ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ, ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ದೆಹಲಿ  “ಕಾರ್ಯಸಾಧ್ಯವಾದ ಸಾಕ್ಷ್ಯ” ವನ್ನು ನೀಡಿದರೆ ಈ ದಾಳಿಯಲ್ಲಿ ಜೆಎಂ ಒಳಗೊಳ್ಳುವಿಕೆ ಬಗ್ಗೆ ತನಿಖೆ ಮಾಡಲು ಸಿದ್ಧ ಎಂದು ತಿಳಿಸಿದ್ದರು. ಈ ಬಗ್ಗೆ ಮತ್ತೆ ಮತ್ತೆ ಹೇಳಿಕೆ ನೀಡಲಾಯಿತು. ಆದರೆ ಸಾರ್ವಜನಿಕರ ದಾರಿ ತಪ್ಪಿಸುವುದಷ್ಟೇ ಉದ್ದೇಶವಾಗಿತ್ತು. ಇಸ್ಲಾಮಾಬಾದ್ ಈ ಘೋರ ದಾಳಿಯ ಜವಾಬ್ದಾರಿಯನ್ನು ಜೆಎಂ ವಹಿಸಿಕೊಂಡ ಬಳಿಕವೂ ಕ್ರಮ ಕೈಗೊಳ್ಳಲು ನಿರಾಕರಿಸಿತು. ಈ ಹಿನ್ನೆಲೆಯಲ್ಲಿಯೇ ಪಾಕ್ ಸೈನ್ಯವು ಪಾಕಿಸ್ತಾನದಲ್ಲಿ ಜೈಶ್ ಇಲ್ಲ ಎಂದು ಹೇಳಿಕೆ ನೀಡಿತ್ತು.  
ಜೆಎಂ ನಿಜವಾಗಿಯೂ ಪಾಕಿಸ್ತಾನದ “ಆಸ್ತಿ”. ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಇತ್ತೀಚೆಗೆ ಪಾಕಿಸ್ತಾನದಲ್ಲಿ ಜೆಎಂ ಇದೆ ಎಂದು ಹೇಳಿದ್ದರು. ಭಾರತದಲ್ಲಿ ದಾಳಿಗಳನ್ನು ನಡೆಸಲು ಇದನ್ನು ಬಳಸಲಾಗುತ್ತಿದೆ. ಅಲ್ಲದೆ ಸಂಘಟನೆಯು ಅವರು ತಮ್ಮ ಮೇಲೆ ದಾಳಿ ನಡೆಸುವ ವಿಫಲ ಯತ್ನ ಮಾಡಿತು ಎಂದೂ ತಿಳಿಸಿದ್ದಾರೆ. ‘ರಾಷ್ಟ್ರೀಯ ಕಾರ್ಯ ಯೋಜನೆ’ ಅಡಿಯಲ್ಲಿ ಉಗ್ರ ವಿರೋಧಿ ಕ್ರಮ ಮತ್ತು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಗೆ ಮಾಡಿದ ಬದ್ಧತೆಯಂತೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಪಾಕ್ ಸಮರ್ಥಿಸಿಕೊಳ್ಳುತ್ತಿದೆ. ಆದರೆ ವಿಶ್ವದ ಅಭಿಪ್ರಾಯವನ್ನು ತಪ್ಪುದಾರಿಗೆಳೆಯಲು ಕಣ್ಣೊರೆಸುವ ತಂತ್ರವಷ್ಟೇ ಇದು. ಪುಲ್ವಾಮಾ ದಾಳಿ ಮಾಡಿದ್ದು ನಾವೇ ಎಂದು ಜೆಎಂ ನೀಡಿದ ಹೇಳಿಕೆ ಹೊರತಾಗಿಯೂ, ಪಾಕಿಸ್ತಾನ ಒಪ್ಪಿಕೊಳ್ಳುತ್ತಿಲ್ಲ ಎಂಬುದು ವಿಪರ್ಯಾಸ.   
ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಪಾಕಿಸ್ತಾನ ಯಾವತ್ತೂ ಪ್ರಾಮಾಣಿಕತನ ಪ್ರದರ್ಶಿಸಿಲ್ಲ. 26/11 ರ ಮುಂಬೈ ದಾಳಿಯ ನಂತರ, ಉಳಿದುಕೊಂಡಿದ್ದ ಉಗ್ರರ ಗುಂಪಿನ ಭಯೋತ್ಪಾದಕ ಅಜ್ಮಲ್ ಕಸಾಬ್  ಕೂಡ ಪಾಕಿಸ್ತಾನದ ನಾಗರಿಕನಾಗಿದ್ದ. ಆತ ಪಾಕಿಸ್ತಾನದ ನಾಗರಿಕರಾಗಿದ್ದಾನೆ ಎಂದು ಜಾಗತಿಕ ಮಾಧ್ಯಮಗಳು ಸಾಬೀತುಪಡಿಸಿದಾಗ, ಪಾಕಿಸ್ತಾನ ವಾಸ್ತವತೆಯನ್ನು ಒಪ್ಪಬೇಕಾಯಿತು.
ಹೊಸದಿಲ್ಲಿ ಯಾವಾಗಲೂ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಯುಎನ್ ಜತೆ ಚರ್ಚಿಸುತ್ತಿದೆ. ಪ್ರಮುಖ ರಾಷ್ಟ್ರಗಳು ಬಲವಾದ ಸಂದೇಶವನ್ನು ಕಳುಹಿಸುವವರೆಗೂ, ಪಾಕಿಸ್ತಾನದಲ್ಲಿ ಯಾವುದೇ ಬದಲಾವಣೆ ಆಗದು. ಯುಎನ್ ಸೆಕ್ಯುರಿಟಿ ಕೌನ್ಸಿಲ್ ನ ಜವಾಬ್ದಾರಿಯುತ ಶಾಶ್ವತ ಸದಸ್ಯರಾಗಿ ಚೀನಾ ಈ ಜಾಗತಿಕ ಬೆದರಿಕೆಯನ್ನು ಎದುರಿಸುವಲ್ಲಿ ಹೆಚ್ಚು ಜವಾಬ್ದಾರಿಯುತ ಪಾತ್ರ ವಹಿಸಬೇಕು. ಚೀನಾ ಪುಲ್ವಾಮ ದಾಳಿಯನ್ನು “ಅತೀ ಪ್ರಬಲ ಪದ” ದಲ್ಲಿ ಖಂಡಿಸಿದ್ದ ಕಾರಣ ಅಜರ್ ವಿರುದ್ಧದ ಪ್ರಸ್ತಾವ ಒಪ್ಪಬಹುದೇನೋ ಎಂದು ಭಾವಿಸಲಾಗಿತ್ತು. ಆದರೆ, ಇಸ್ಲಾಮಾಬಾದಿಗೆ ಬೆಂಬಲ ನೀಡಿ ನಿರೀಕ್ಷೆ ಹುಸಿ ಮಾಡಿದೆ. 
ಏತನ್ಮಧ್ಯೆ, “ಭಾರತೀಯ ನಾಗರಿಕರ ಮೇಲೆ ಘೋರ ದಾಳಿ ಮಾಡಿರುವ ಭಯೋತ್ಪಾದಕರಿಗೆ ಶಿಕ್ಷೆ ಕೊಡಿಸಲು ಲಭ್ಯವಿರುವ ಎಲ್ಲಾ ಮಾರ್ಗಗಳನ್ನು ಅನುಸರಿಸುತ್ತೇವೆ” ಎಂದು ಭಾರತ ಹೇಳಿದೆ.  
ಲೇಖನ : ಅಶೋಕ್ ಹಂದೂ, ರಾಜಕೀಯ ವಿಶ್ಲೇಷಕರು