ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿಂದು ಚುನಾವಣಾ ಆಯೋಗದಿಂದ ಕೇಂದ್ರ ವೀಕ್ಷಕರುಗಳ ಸಭೆ.

ಬರಲಿರುವ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಲು ನವದೆಹಲಿಯಲ್ಲಿಂದು ಕೇಂದ್ರ ವೀಕ್ಷಕರುಗಳ ಸಭೆಯನ್ನು ಚುನಾವಣಾ ಆಯೋಗ ನಡೆಸಲಿದೆ. ಚುನಾವಣಾ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳು, ಜವಾಬ್ದಾರಿ ಹಾಗೂ ಪಾತ್ರ ಕುರಿತಂತೆ ಕೇಂದ್ರ ವೀಕ್ಷಕರುಗಳಿಗೆ ಈ ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ. ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ ನಂತರ ನಡೆಯುತ್ತಿರುವ ಮೊಟ್ಟ ಮೊದಲ ಸಭೆ ಇದಾಗಿದೆ. ದಿನವಿಡೀ ನಡೆಯಲಿರುವ ಈ ಸಭೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗುವ ಹಣ ಮತ್ತು ಮದ್ಯ ಸೇರಿದಂತೆ ಇನ್ನಿತರ ಅಕ್ರಮ ವಸ್ತುಗಳ ಸಾಗಣೆ ತಡೆಯುವುದು ಹಾಗೂ ಅಭ್ಯರ್ಥಿಗಳ ವೆಚ್ಚಗಳ ಮೇಲೆ ನಿಗಾವಹಿಸಲು ಚುನಾವಣಾ ಆಯೋಗದ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಬಗ್ಗೆ ಚರ್ಚಿಸಲಾಗುತ್ತದೆ. ಭಾರತೀಯ ಕಂದಾಯ ಸೇವೆ, ಭಾರತೀಯ ಆಡಳಿತ ಸೇವೆ ಹಾಗೂ ಭಾರತೀಯ ಪೊಲೀಸ್ ಸೇವೆ ಸೇರಿದಂತೆ ಹಲವು ಕೇಂದ್ರ ಸೇವೆಗಳ ಅಧಿಕಾರಿಗಳನ್ನು ಹಾಗೂ ಇತರರನ್ನು ಕೇಂದ್ರ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುವ ವರೆಗೆ ಇವರೆಲ್ಲ ಚುನಾವಣಾ ಕರ್ತವ್ಯದ ಅಧಿಕಾರಿಗಳಾಗಿರುತ್ತಾರೆ.