ಸ್ವಿಸ್ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿ ; ಭಾರತದ ಬಿ. ಸಾಯಿ ಪ್ರಣೀತ್ ಫೈನಲ್ ಪ್ರವೇಶ.

ಸ್ವಿಡ್ಜರ್‌ಲೆಂಡ್‌ನ ಬಾಸೆಲ್‌ನಲ್ಲಿ ನಿನ್ನೆ ನಡೆದ ಸ್ವಿಸ್ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಬಿ. ಸಾಯಿ ಪ್ರಣೀತ್ ಫೈನಲ್ ತಲುಪಿದ್ದಾರೆ.

೨೨ನೇ ಶ್ರೇಯಾಂಕಿತ ಸಾಯಿ ಪ್ರಣೀತ್ ಅವರು, ಸೆಮಿಫೈನಲ್ ಪಂದ್ಯದಲ್ಲಿ ೫ನೇ ಶ್ರೇಯಾಂಕಿತ ಚೈನಾದ ಚೆನ್ ಲಾಂಗ್ ವಿರುದ್ಧ ೨೧-೧೮ ಮತ್ತು ೨೧-೧೩ ಅಂತರದಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತು ತಲುಪಿದರು. ಚೆನ್ ಲಾಂಗ್ ವಿರುದ್ಧದ ಕಳೆದ ೩ ಪಂದ್ಯಗಳಲ್ಲಿ ಸಾಯಿ ಪ್ರಣೀತ್ ಅವರಿಗೆ ಇದು ಮೊದಲ ಜಯವಾಗಿದೆ.

ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಾಯಿ ಪ್ರಣೀತ್, ಚೀನಾದ ಅಗ್ರ ಶ್ರೇಯಾಂಕಿತ ಶಿ-ಯುಕಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಮತ್ತೊಂದೆಡೆ  ಚೀನಾದ ಲಿಂಗ್‌ಶೂಯ್‌ನಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ‍್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಹೋರಾಟ ಕೊನೆಗೊಂಡಿದೆ.

ನಿನ್ನೆ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್‌ನಲ್ಲಿ ಭಾರತದ ಲಕ್ಷ್ಯಾ ಸೇನ್ ಅವರು ಚೀನಾದ ಹಾಂಗ್‌ಯಾಂಗ್ ವೆಂಗ್ ವಿರುದ್ಧ ಪರಾಭವಗೊಂಡು ಪಂದ್ಯಾವಳಿಯಿಂದ ನಿರ್ಗಮಿಸಿದರು.