ಕರ್ನಾಟಕದ ೧೪ ಕ್ಷೇತ್ರಗಳು ಸೇರಿದಂತೆ ೯೭ ಲೋಕಸಭಾ ಸ್ಥಾನಗಳ ಚುನಾವಣೆಗೆ ಅಧಿಸೂಚನೆ ಪ್ರಕಟ

ಎರಡನೇ ಹಂತದ ಲೋಕಸಭಾ ಚುನಾವಣಿಗೆ ಕೇಂದ್ರ ಚುನಾವಣಾ ಆಯೋಗ ಇಂದು ಅಧಿಸೂಚನೆ ಹೊರಡಿಸಿದೆ. ಏಪ್ರಿಲ್ ೧೮ ರಂದು ಕರ್ನಾಟಕ ಸೇರಿದಂತೆ ೧೩ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿಕೊಂಡಿರುವ ೯೭ ಕ್ಷೇತ್ರಗಳಲ್ಲಿ ಮತದಾನ ನಡೆಯುವುದು. ನಾಮಪತ್ರ ಸಲ್ಲಿಕೆಗೆ ಮಾರ್ಚ್ ೨೬ ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಕಾರ್ಯ ಮಾರನೆಯ ದಿನ ೨೭ ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮಾರ್ಚ್ ೨೯ ಕಡೆಯ ದಿನ. ತಮಿಳುನಾಡಿನ ಎಲ್ಲಾ ೩೯ ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ೧೪, ಮಹಾರಾಷ್ಟ್ರದ ೧೦, ಉತ್ತರಪ್ರದೇಶದ ೮, ಅಸ್ಸಾಂ,ಬಿಹಾರ ಹಾಗೂ ಒಡಿಶಾದ ತಲಾ ೫, ಛತ್ತೀಸ್‌ಗಡ ಹಾಗೂ ಪಶ್ಚಿಮಬಂಗಾಳದ ತಲಾ ೩, ಜಮ್ಮು ಮತ್ತು ಕಾಶ್ಮೀರದ ೨, ಹಾಗೂ ಮಣಿಪುರ, ತ್ರಿಪುರ ಹಾಗೂ ಪುದುಚೆರಿಯ ತಲಾ ೧ ಲೋಕಸಭಾ ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯಲಿದೆ.