ಮಸೀದಿಗೆ ತೆರಳಿದ್ದ ೫೦ ಮಂದಿಯ ಸಾವಿಗೆ ಕಾರಣವಾದ ಕ್ರೈಸ್ಟ್ ಚರ್ಚ್ ಹತ್ಯಾಕಾಂಡ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ನಲ್ಲಿ ಶಸ್ತ್ರಾಸ್ತ್ರಗಳ ಮೇಲೆ ತಕ್ಷಣದಿಂದಲೇ ಜಾರಿಯಾಗುವಂತೆ ನಿಷೇಧ ಹೇರಲಾಗಿದೆ. ನ್ಯೂಜಿಲೆಂಡ್ ಪ್ರಧಾನಮಂತ್ರಿ ಜೆಸಿಂಡಾ ಆರ್ಡೆರ್ನ್, ಕ್ರೈಸ್ಟ್ ಚರ್ಚ್ ಘಟನೆ ಮರುಕಳಿಸದಂತೆ ಸೇನಾ ಮಾದರಿಯ ಅರೆ ಶಸ್ತ್ರಾಸ್ತ್ರಗಳು ಮತ್ತು ಇತರ ಶಸ್ತ್ರಾಸ್ತ್ರಗಳ ಮೇಲೆ ತಕ್ಷಣದಿಂದ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ. ತೀವ್ರಗತಿಯಲ್ಲಿ ಗುಂಡುಗಳನ್ನು ಹಾರಿಸಬಹುದಾದ ಹೆಚ್ಚು ಸಾಮರ್ಥ್ಯದ ಮ್ಯಾಗಜೈನ್ ಮತ್ತು ಇತರ ಇದೇ ಮಾದರಿಯ ಶಸ್ತ್ರಾಸ್ತ್ರಗಳನ್ನೂ ನಿಷೇಧಿಸಲಾಗುವುದು ಎಂದು ಅವರು ಹೇಳಿದರು. ಅಮೆರಿಕ ಸಂಸತ್ನಲ್ಲಿನ ಡೆಮಾಕ್ರೆಟಿಕ್ ಪಕ್ಷದ ಸಂಸದ ಬೆರ್ನಿ ಸಾಂಡರ್ಸ್ ಟ್ವೀಟ್ ಮಾಡಿದ್ದು, ನ್ಯೂಜಿಲ್ಯಾಂಡ್ ತೆಗೆದುಕೊಂಡ ನಿರ್ಧಾರವನ್ನು ಅಮೆರಿಕ ಅನುಸರಿಸುವ ಮೂಲಕ ದೇಶದಲ್ಲಿ ಶಸ್ತ್ರಾಸ್ತ್ರಗಳ ಮಾರಾಟ ಮತ್ತು ನಿಷೇಧಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.