ಎರಡನೇ ಹಂತದ ಲೋಕಸಭಾ ಚುನಾವಣೆಗೆ ದೇಶಾದ್ಯಂತ ವಿವಿಧ ರಾಜಕೀಯ ಪಕ್ಷದ ಮುಖಂಡರಿಂದ ರ‍್ಯಾಲಿ

೨ನೆ ಹಂತದ ಲೋಕಸಭಾ ಚುನಾವಣೆಗೆ ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೇರಿದಂತೆ ಹಲವು ಹಿರಿಯ ನಾಯಕರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಸಾರ್ವಜನಿಕ ಸಮಾವೇಶಗಳಲ್ಲಿ ಭಾಗವಹಿಸಿ ಮತಯಾಚಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಾರ ನಡೆಸಿದರು. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದರೆ, ಅಮಿತ್ ಷಾ ಮತ್ತು ಮಾಯಾವತಿ ಉತ್ತರ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು.

ಗುರುವಾರ ಎರಡನೇ ಹಂತದ ಮತದಾನ ನಡೆಯಲಿದೆ. ೧೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ೯೭ ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನ ಎಲ್ಲಾ ೩೯ ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆಯಲಿದೆ. ಕರ್ನಾಟಕದ ೧೪, ಮಹಾರಾಷ್ಟ್ರದ ೧೦, ಉತ್ತರ ಪ್ರದೇಶದ ೮, ಅಸ್ಸಾಂ, ಬಿಹಾರ, ಒಡಿಸ್ಸಾದ ತಲಾ ಐದು, ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಳ ತಲಾ ೩, ಜಮ್ಮು-ಕಾಶ್ಮೀರದ ಎರಡು, ಮಣಿಪುರ, ತ್ರಿಪುರಾ ಮತ್ತು ಪುದುಚೇರಿಯ ತಲಾ ಒಂದು ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ತಮಿಳುನಾಡಿನಲ್ಲಿ ಕಳೆದ ರಾತ್ರಿ ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತ ಸಾಹೂ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಆಶುತೋಷ್ ಶುಕ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳು ಚುನಾವಣಾ ಸಿದ್ಧತೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು. ಕ್ಷೇತ್ರವಾರು ಭದ್ರತಾ ಸಿಬ್ಬಂದಿ ನಿಯೋಜನೆ ಮತ್ತು ಸೂಕ್ಷ್ಮ ಮತಗಟ್ಟೆಗಳಲ್ಲಿ ಕೈಗೊಳ್ಳಬೇಕಾದ ವಿಶೇಷ ವ್ಯವಸ್ಥೆಗಳ ಬಗ್ಗೆ ಚುನಾವಣಾಧಿಕಾರಿಗಳು ಚರ್ಚೆ ನಡೆಸಿದರು.

ಇವಿಎಂಗಳು, ವಿವಿಪ್ಯಾಟ್‌ಗಳು ಮತ್ತು ಇತರ ಚುನಾವಣಾ ಸಂಬಂಧಿತ ಸಲಕರಣೆಗಳನ್ನು ಮತಗಟ್ಟೆಗಳಿಗೆ ತಲುಪಿಸಲು ವಲಯ ಸಮಿತಿಗಳನ್ನು ಕೂಡ ರಚಿಸಲಾಗಿದೆ. ರಾಜ್ಯದಲ್ಲಿ ಚುನಾವಣಾ ಖರ್ಚು ವೆಚ್ಚಗಳನ್ನು ಪರಿಶೀಲಿಸುವ ಬಗ್ಗೆ, ಅಕ್ರಮ ಹಣ ವಿತರಣೆ, ಅಭ್ಯರ್ಥಿಗಳ ಭದ್ರತೆ ಮತ್ತು ಎಸ್‌ಎಂಎಸ್ ಮತದಾನ ನಿಗಾ ವ್ಯವಸ್ಥೆಗಳ ಬಗ್ಗೆಯೂ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಸುಗಮ ಮತದಾನ ಮತ್ತು ಮತದಾನ ಜಾಗೃತಿಗೆ ಕರ್ನಾಟಕದಲ್ಲಿ ಚುನಾವಣಾ ಆಯೋಗ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ನಮ್ಮ ಕರ್ನಾಟಕದ ಬಾತ್ಮೀದಾರರು ವರದಿ ಮಾಡಿದ್ದಾರೆ. ಹಲವು ನಾಗರಿಕ ಸಂಘ ಸಂಸ್ಥೆಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಟನೆಗಳೊಂದಿಗೆ ಸೇರಿ ಮುಖ್ಯ ಚುನಾವಣಾಧಿಕಾರಿ ಕಚೇರಿ, ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ವಿಶೇಷವಾಗಿ ವಿಶೇಷ ಚೇತನರಿಗೆ ಹಲವು ಸೌಲಭ್ಯಗಳನ್ನು ಆಯೋಗ ಕಲ್ಪಿಸಿದೆ.

ಮತದಾನ ದಿನ ವಿಶೇಷ ಚೇತನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮತ್ತು ವೀಲ್ ಚೇರ್ ಒದಗಿಸಲು ಚುನಾವಣಾ  ಮೊಬೈಲ್ ಆಪ್ ಮೂಲಕ ಅವಕಾಶ ಒದಗಿಸಲಾಗಿದೆ.