ಡಾ. ಭೀಮ್‌ರಾವ್ ಅಂಬೇಡ್ಕರ್ ಅವರ ೧೨೮ನೇ ಜಯಂತಿ ಅಂಗವಾಗಿ ದೇಶಾದ್ಯಂತ ಸಂವಿಧಾನ ಶಿಲ್ಪಿಯ ಸ್ಮರಣೆ

ಭಾರತದ ಸಂವಿಧಾನ ನಿರ್ಮಾತೃ, ಡಾ|| ಭೀಮ್ ರಾವ್ ರಾಮಜಿ ಅಂಬೇಡ್ಕರ್ ಅವರ ೧೨೮ನೇ ಜಯಂತಿ ಅಂಗವಾಗಿ ದೇಶ ಇಂದು ಅವರ ಕೊಡುಗೆಯನ್ನು ಸ್ಮರಿಸುತ್ತಿದೆ.

೧೮೯೧ರ ಈ ದಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈಗ ಡಾ:ಅಂಬೇಡ್ಕರ್ ನಗರ  ಎಂದು ಕರೆಯಲ್ಪಡುವ ಮಧ್ಯಪ್ರದೇಶದಲ್ಲಿರುವ ಮೌ ಪ್ರದೇಶದಲ್ಲಿ ಜನಿಸಿದ್ದರು. ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ ಇಂದು ರಾಷ್ಟ್ರದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಂಸತ್ ಭವನದ ಸಂಕೀರ್ಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಇಂದು ಬೆಳಗ್ಗೆ ಗೌರವ ನಮನ ಸಲ್ಲಿಸಲಾಯಿತು.  ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಬ್ಬ ಉತ್ತಮ ನಾಯಕರೆನಿಸಿದ್ದ ಅಂಬೇಡ್ಕರ್ ಧಮನಿತರು ಹಾಗೂ ಶೋಷಿತವರ್ಗದ ಹಕ್ಕುಗಳಿಗಾಗಿ ಹೋರಾಡಿದರು ಎಂದು ಸ್ಮರಿಸಿದ್ದಾರೆ.

ಅಂಬೇಡ್ಕರ್ ಅವರ ಜೀವನ ಹಾಗೂ ಚಿಂತನೆಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದ್ದು, ಅವುಗಳನ್ನು ಜನರು ಅಳವಡಿಸಿಕೊಳ್ಳುವಂತೆ ರಾಷ್ಟ್ರಪತಿ ಕರೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಸಮಕಾಲೀನ ಭಾರತದ ಇತಿಹಾಸದಲ್ಲಿ ಅಂಬೇಡ್ಕರ್ ಅವರು ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ.

ಸಾಮಾಜಿಕ ಬದಲಾವಣೆಯ ಹರಿಕಾರ, ಕಾನೂನು ಪಂಡಿತ ಹಾಗೂ ಅದ್ವಿತೀಯ ವಿದ್ವಾಂಸರಾಗಿದ್ದ ಡಾ: ಅಂಬೇಡ್ಕರ್ ಜನರ ಹಕ್ಕುಗಳ ನಾಯಕ ಎಂದು ಬಣ್ಣಿಸಿದ್ದಾರೆ.

ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಅಂಬೇಡ್ಕರ್ ಅವರು ಶಿಕ್ಷಣ ಮೂಲಕ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಪ್ರತಿಪಾದಿಸಿದರು.

ದೇಶದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅವರ ಚಿಂತನೆಗಳು, ಪ್ರತಿಯೊಬ್ಬ ಭಾರತೀಯನಿಗೂ ಸಾರ್ವಕಾಲಿಕ ಸ್ಫೂರ್ತಿ ನೀಡುತ್ತವೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಡಾ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ತಮ್ಮ ಟ್ವೀಟ್ ಸಂದೇಶದಲ್ಲಿ ಅವರು, ಭಾರತದ ಸಂವಿಧಾನದ ಮುಖ್ಯ ನಿರ್ಮಾತೃ ಆಗಿರುವ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಹರಿಕಾರ ಎಂದು ಬಣ್ಣಿಸಿದ್ದಾರೆ.