ಇದೇ ಗುರುವಾರದಂದು ಲೋಕಸಭಾ ಚುನಾವಣೆಯ ೨ನೇ ಹಂತದ ಮತದಾನ – ಕರ್ನಾಟಕ ಸೇರಿದಂತೆ ೧೨ ರಾಜ್ಯಗಳು ಮತ್ತು ೧ ಕೇಂದ್ರಾಡಳಿತ ಪ್ರದೇಶದಲ್ಲಿ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆಯವರೆಗೆ ಮಾತ್ರ ಅವಕಾಶ – ಹಲವು ಪಕ್ಷಗಳ ನಾಯಕರು ಮತ್ತು ಪಕ್ಷೇತರ ಅಭ್ಯರ್ಥಿಗಳಿಂದ ಬಿಡುವಿಲ್ಲದ ಮತಯಾಚನೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಬಿರುಸುಗೊಂಡಿದ್ದು, ೨ನೇ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ತೆರೆ ಬೀಳಲಿದೆ. ಅಂತ್ಯಕ್ಕೆ ಇನ್ನೆರಡು ದಿನ  ಬಾಕಿ ಇದೆ. ಈ ಹಂತದಲ್ಲಿ ಕರ್ನಾಟಕ ಸೇರಿದಂತೆ ೧೨ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ೯೭ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಹಲವು ರಾಜಕೀಯ ಪಕ್ಷಗಳ ಉನ್ನತಮಟ್ಟದ ನಾಯಕರು ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಕರ್ನಾಟಕದ ೧೪ ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಚುನಾವಣೆ ನಿಗದಿಯಾಗಿದ್ದು, ನಾಳೆ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದುದ, ಹಲವು ಪಕ್ಷಗಳ ನಾಯಕರು ಹಆಗೂ ಪಕ್ಷೇತರ ಅಭ್ಯರ್ಥಿಗಳು ಬಿಡುವಿಲ್ಲದ ಪ್ರಚಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಿನ್ನೆ ಜಮ್ಮುವಿನ ಕಥುವಾ  ಹಾಗೂ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಅಲಿಗಢದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದರು. ಎನ್‌ಡಿಎ ಸರ್ಕಾರದ ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿಯೋಜನೆಯಡಿ ಎಲ್ಲರ  ಪ್ರಗತಿಗೆ ಯತ್ನಿಸಲಾಗಿದ್ದು,  ಭಯೋತ್ಪಾದನೆ, ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ  ಎಂದು ಹೇಳಿದರು. ಗುಜರಾತ್‌ನ ಗಾಂಧಿನಗರ ಕ್ಷೇತ್ರದ ಕಲೋಲ್ ನಗರದಲ್ಲಿ  ನಿನ್ನೆ ರೋಡ್ ಶೋ ನಡೆಸಿದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಬಿಜೆಪಿ ಪರ ಮತ ಯಾಚಿಸಿದರು.  ಮತ್ತೊಂದೆಡೆ ಅಸ್ಸಾಂನ ಸಿಲ್ಚಾರ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ ನಡೆಸಿದರು. ಅಸ್ಸಾಂ ರಾಜ್ಯಕ್ಕೆ ಕಾಂಗ್ರೆಸ್ ವಿಶೇಷ ಸ್ಥಾನಮಾನವನ್ನು  ನೀಡಿತ್ತು. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ಅದನ್ನು ತೆಗೆದು ಹಾಕಿತು ಎಂದು ಆರೋಪಿಸಿದರು. ಪ್ರಿಯಾಂಕಾ ವಾದ್ರಾ ಇದೇ ಪ್ರಥಮ ಬಾರಿಗೆ ಉತ್ತರ ಪ್ರದೇಶದ ಹೊರಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ೨ನೇ ಹಂತದ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ ೩೯ ಕ್ಷೇತ್ರಗಳೂ, ಮಹಾರಾಷ್ಟ್ರದ ೧೦,  ಉತ್ತರ ಪ್ರದೇಶದ ೮, ಅಸ್ಸಾಂ, ಬಿಹಾರ, ಒಡಿಶಾದ ತಲಾ ೫, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳದ ತಲಾ ೩, ಜಮ್ಮು ಕಾಶ್ಮೀರದ ೨  ಹಾಗೂ ಮಣಿಪುರ, ತ್ರಿಪುರ ಮತ್ತು ಪುದುಚೇರಿಯ ತಲಾ ೧ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲೋಕಸಭೆಯ ಒಟ್ಟು ೫೪೩ ಕ್ಷೇತ್ರಗಳಿಗೆ ೭ ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಕಳೆದ ೧೧ ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡ ೬೯.೪೩ರಷ್ಟು ಮತದಾನವಾಗಿತ್ತು. ಎಲ್ಲಾ ಹಂತಗಳ ಮತ ಎಣಿಕೆ ಕಾರ್ಯ  ಮೇ ೨೩ ರಂದು ನಡೆದು ಫಲಿತಾಂಶ ಪ್ರಕಟವಾಗಲಿದೆ.