ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ; ವಿವಿಧ ರಾಜಕೀಯ ಪಕ್ಷಗಳ ಪ್ರಚಾರಕಾರ್ಯ ಬಿರುಸು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಬಿರುಸುಗೊಂಡಿದ್ದು, ೨ನೇ ಹಂತದ ಮತದಾನದ ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡು ದಿನ  ಬಾಕಿ ಇದೆ. ಈ ಹಂತದಲ್ಲಿ ೧೩ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ೯೭ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಜಮ್ಮುವಿನ ಕಥುವಾ  ಹಾಗೂ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಅಲೀಗಢದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದರು. ಎನ್‌ಡಿಎ ಸರ್ಕಾರದ ’ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ’ ಯೋಜನೆಯಡಿ ಎಲ್ಲರ  ಪ್ರಗತಿಗೆ ಯತ್ನಿಸಲಾಗಿದ್ದು,  ಭಯೋತ್ಪಾದನೆ, ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ  ಎಂದು ಪ್ರಧಾನಿ ತಿಳಿಸಿದರು.

ಗುಜರಾತ್‌ನ ಗಾಂಧಿನಗರ ಕ್ಷೇತ್ರದ ಕಲೋಲ್ ನಗರದಲ್ಲಿ  ನಿನ್ನೆ ರೋಡ್ ಶೋ ನಡೆಸಿದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಬಿಜೆಪಿ ಪರ ಮತ ಯಾಚಿಸಿದರು.  ಮತ್ತೊಂದೆಡೆ ಅಸ್ಸಾಂನ ಸಿಲ್‌ಚಾರ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ ನಡೆಸಿ, ಅಸ್ಸಾಂನ ಹಲವು ಸಮಸ್ಯೆಗಳಿಗೆ ಸರ್ಕಾರ ಪರಿಹಾರ ದೊರಕಿಸುತ್ತಿಲ್ಲ ಎಂದು ಆರೋಪಿಸಿದರು. ಪ್ರಿಯಾಂಕಾ ವಾದ್ರಾ ಇದೇ ಪ್ರಥಮ ಬಾರಿಗೆ ಉತ್ತರ ಪ್ರದೇಶದ ಹೊರಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಉತ್ತರ ಪ್ರದೇಶದ ರಾಮ್‌ಪುರ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ದೇಶದಲ್ಲಿ ಮಹತ್ತರ ಬದಲಾವಣೆ ತರಲು ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿಕೂಟ ರಚಿಚಲಾಗಿದೆ   ಎಂದರು.

ಛತ್ತೀಸ್‌ಗಢದ ಜಿಂಜ್‌ಗೀರ್-ಚಂಪಾ  ಜಿಲ್ಲೆಗಳಲ್ಲಿ ಪ್ರಚಾರಸಭೆ ನಡೆಸಿದ ಬಿಎಸ್‌ಪಿ ನಾಯಕಿ ಮಾಯಾವತಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನ್ಯಾಯ್”  ಯೋಜನೆಯನ್ನು  ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ  ಪಕ್ಷಗಳೆರಡೂ ಅಧಿಕಾರದ ಅವಧಿಯಲ್ಲಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿವೆ ಎಂದು ಅವರು ಆರೋಪಿಸಿದರು.

೨ನೇ ಹಂತದ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ ೩೯ ಕ್ಷೇತ್ರಗಳೂ, ಕರ್ನಾಟಕದ ೧೪, ಮಹಾರಾಷ್ಟ್ರದ ೧೦,  ಉತ್ತರ ಪ್ರದೇಶದ ೮, ಅಸ್ಸಾಂ, ಬಿಹಾರ, ಒಡಿಶಾದ ತಲಾ ೫, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳದ ತಲಾ ೩, ಜಮ್ಮು ಕಾಶ್ಮೀರದ ೨  ಹಾಗೂ ಮಣಿಪುರ, ತ್ರಿಪುರ ಮತ್ತು ಪುದುಚೇರಿಯ ತಲಾ ೧ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಲೋಕಸಭೆಯ ಒಟ್ಟು ೫೪೩ ಕ್ಷೇತ್ರಗಳಿಗೆ ೭ ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಕಳೆದ ೧೧ ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡ ೬೯.೪೩ರಷ್ಟು ಮತದಾನವಾಗಿತ್ತು.