ಶ್ರೀಲಂಕಾದಲ್ಲಿ ಚರ್ಚ್ ಮತ್ತು ಹೋಟೆಲ್‌ಗಳನ್ನು ಗುರಿಯಾಗಿಸಿ, ಸರಣಿ ಬಾಂಬ್ ಸ್ಫೋಟ- ಕನಿಷ್ಠ ೧೨೯ ಮಂದಿ ಸಾವು, ೩೮೦ಕ್ಕೂ ಅಧಿಕ ಮಂದಿಗೆ ಗಾಯ.

ಶ್ರೀಲಂಕಾದ ರಾಜಧಾನಿ ಕೋಲಂಬೋದ ಫೈಸ್ಟಾರ್ ಹೋಟೆಲ್‌ಗಳು ಮತ್ತು ದೇಶದ ಇತರ ಕಡೆಗಳಲ್ಲಿ ಚರ್ಚ್‌ಗಳನ್ನು ಗುರಿಯಾಗಿಸಿ ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ ೧೨೯ ಮಂದಿ ಸಾವನ್ನಪ್ಪಿ, ೩೮೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.  ಕೊಲಂಬೋದ ಶಾಂಗ್ರಿಲಾ, ಕಿಂಗ್ಸ್‌ಬರಿ, ಚಿನಾಮೋನ್ ಗ್ರಾಂಡ್ ಹೋಟೆಲ್‌ಗಳಲ್ಲಿ ಈ ಸ್ಫೋಟ ಸಂಭವಿಸಿದ್ದು, ಹಲವು ವಿದೇಶಿಯರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊಲಂಬೋದ ಸೈಂಟ್ ಆಂಟೋನಿ ಚರ್ಚ್ ಮತ್ತು ನೆಗೋಂಬೋ ಹಾಗೂ ಬ್ಯಾಟಿಕೊಲೊದ ಎರಡು ಚರ್ಚ್‌ಗಳಲ್ಲಿ ಸ್ಫೋಟ ಸಂಭವಿಸಿವೆ.  ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳು ಮತ್ತು ಹೋಟೆಲ್‌ಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಂದು ಬೆಳಗ್ಗೆ ೯ ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ. ಪರಿಸ್ಥಿತಿಯ ಅವಲೋಕನಕ್ಕಾಗಿ ಪ್ರಧಾನಮಂತ್ರಿ ರಣಿಲ್ ವಿಕ್ರಮಸಿಂಗೆ ತುರ್ತುಸಭೆ ನಡೆಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಚರ್ಚ್‌ಗಳು ಮತ್ತು ಹೋಟೆಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲಂಬೋದಲ್ಲಿರುವ ಭಾರತೀಯ ಹೈಕಮೀಷನರ್‌ರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಶ್ರೀಲಂಕಾದ ಚರ್ಚ್‌ಗಳು ಮತ್ತು ಹೋಟೆಲ್‌ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಘಟನೆಗಳ ಬಳಿಕ ಪರಿಸ್ಥಿತಿಯನ್ನು ನವದೆಹಲಿ ಸೂಕ್ಷವಾಗಿ ಗಮನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.