ಕರ್ನಾಟಕ ಸೇರಿದಂತೆ ೧೩ ರಾಜ್ಯ, ೨ ಕೇಂದ್ರಾಡಳಿತ ಪ್ರದೇಶದಲ್ಲಿನ ೧೧೬ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯಲಿದೆ. ಈ ಹಂತದಲ್ಲಿ ೧೩ ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ೧೧೬ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಗುಜರಾತ್‌ನ ೨೬ ಕ್ಷೇತ್ರಗಳು, ಕೇರಳ ೨೦, ಮಹಾರಾಷ್ಟ್ರ ಮತ್ತು ಕರ್ನಾಟಕ ತಲಾ ೧೪ ಕ್ಷೇತ್ರಗಳು, ಉತ್ತರಪ್ರದೇಶ ೧೦ , ಛತ್ತೀಸ್‌ಗಢ ೭, ಒಡಿಶಾ ೬, ಬಿಹಾರ ಮತ್ತು ಪಶ್ಚಿಮ ಬಂಗಾಳದ ತಲಾ ೫ ಕ್ಷೇತ್ರಗಳು, ಅಸ್ಸಾಂ ೪, ಗೋವಾ ೨, ಜಮ್ಮು ಮತ್ತು ಕಾಶ್ಮೀರ, ದಾದ್ರ ಮತ್ತು ನಗರ್‌ಹವೇಲಿ, ದಾಮನ್ ಮತ್ತು ದಿಯು ಹಾಗು ತ್ರಿಪುರಾದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮತದಾನ ಸಮಯ ನಿಗದಿಯಾಗಿದ್ದು ಶಾಂತಿಯುತ ಮತದಾನ ನಡೆಯಲು ಎಲ್ಲೆಡೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಗುಜರಾತ್‌ನ ಎಲ್ಲಾ ೨೬ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ೩೭೧ ಅಭ್ಯರ್ಥಿಗಳು ಲೋಕಸಭಾ ಕಣದಲ್ಲಿದ್ದರೆ, ನಾಲ್ಕು ವಿಧಾನಸಭಾ ಸ್ಥಾನಗಳಿಗೆ ೪೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖ ಅಭ್ಯರ್ಥಿಗಳಾದ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಮಾಜಿ ಕೇಂದ್ರಸಚಿವ ಮನ್‌ಸುಖ್ ವಾಸವಾ, ಮೋಹನ್ ಕುಂಡಾರಿಯಾ ಮತ್ತು ಭರತ್‌ಸಿಂಗ್ ಸೋಲಂಕಿ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಮಹಾರಾಷ್ಟ್ರದ ೧೪ ಲೋಕಸಭಾ ಕ್ಷೇತ್ರಗಳಲ್ಲಿ ೧೯ ಮಹಿಳೆಯರು ಸೇರಿದಂತೆ ೨೪೯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಗೋವಾದ ನಡೆಯಲಿರುವ ಎರಡು ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ೧೨ ಅಭ್ಯರ್ಥಿಗಳು ಕಣದಲ್ಲಿದ್ದರೆ, ಮೂರು ವಿಧಾನಸಭಾ ಉಪಚುನಾವಣೆಗೆ ೧೮ ಮಂದಿ ಉಮೇದುವಾರರಿದ್ದಾರೆ.
ಕೇರಳದ ೨೦ ಲೋಕಸಭಾ ಕ್ಷೇತ್ರಗಳಿಗೆ ೨೩ ಮಹಿಳೆಯರು ಸೇರಿದಂತೆ ೨೨೭ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ಕೇಂದ್ರ ಸಚಿವ ಕೆ ಜೆ ಅಲ್ಫಾನ್ಸೋ, ಶಶಿ ತರೂರ್, ಕೆ ರಾಜಶೇಖರನ್, ಸುರೇಶ್ ಗೋಪಿ ಮತ್ತು ಕೆ ಸುರೇಂದ್ರನ್ ಕಣದಲ್ಲಿದ್ದಾರೆ.
ಉತ್ತರಪ್ರದೇಶದಲ್ಲಿ ಮೊರಾದಾಬಾದ್, ರಾಂಪುರ್, ಸಂಭಾಲ್, ಫಿರೋಝಾಬಾದ್, ಮೈನ್‌ಪುರಿ, ಬರೇಲಿ ಮತ್ತು ಫಿಲಿಭಿಟ್ ಸೇರಿದಂತೆ ೧೦ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ೧೪ ಮಹಿಳೆಯರು ಸೇರಿದಂತೆ ೧೨೦ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಲಾಯಂ ಸಿಂಗ್ ಯಾದವ್, ಸಂತೋಷ್ ಗಂಗ್ವಾರ್, ಜಯಪ್ರದಾ, ವರುಣ್ ಗಾಂಧಿ, ಶಿವ್‌ಪಾಲ್ ಯಾದವ್ ಮತ್ತು ಅಜಂಖಾನ್ ಕಣದಲ್ಲಿರುವ ಪ್ರಮುಖರು.
ಬಿಹಾರದಲ್ಲಿ ಐವರು ಮಹಿಳೆಯರು ಸೇರಿದಂತೆ ೩೨ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಛತ್ತೀಸ್‌ಗಢದ ೭ ಲೋಕಸಭಾ ಕ್ಷೇತ್ರಗಳಲ್ಲಿ ೧೨೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಯ್‌ಪುರ್, ದುರ್ಗ್, ಬಿಲಾಸ್‌ಪುರ್, ಕೋರ್ಬಾ, ಜಂಜ್‌ಗೀರ್-ಚಂಪಾ, ಸುರ್‌ಗುಜಾ ಮತ್ತು ರಾಯ್‌ಗರ್ ಕ್ಷೇತ್ರಗಳೂ ಈ ಹಂತದಲ್ಲಿ ಸೇರಿವೆ. ರಾಜ್ಯದಲ್ಲಿ ಪಾರಾಮಿಲಿಟರಿ ಹಾಗು ರಾಜ್ಯ ಪಡೆ ಸೇರಿದಂತೆ ಸುಮಾರು ೬೦ ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಒಡಿಶಾದ ೬ ಲೋಕಸಭಾ ಕ್ಷೇತ್ರಗಳು ಹಾಗೂ ೪೨ ವಿಧಾನಸಭಾ ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ಜರುಗಲಿದೆ.