ಬೆಂಗಳೂರಿನಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಅವರ ಸಹಾಸದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೧೭ ರನ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪರಾಭವಗೊಳಿಸಿದೆ.
ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ ೨೦ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೨೦೨ ರನ್ ಕಲೆಹಾಕಿತು. ಅಬ್ಬರದ ಬ್ಯಾಟಿಂಗ್ ನಡೆಸಿದ ಎಬಿ ಡಿ ವಿಲಿಯರ್ಸ್ ಕೇವಲ ೪೪ ಎಸೆತಗಳಲ್ಲಿ ೩ ಬೌಂಡರಿ, ೭ ಸಿಕ್ಸರ್ ಒಳಗೊಂಡ ಅಜೇಯ ೮೨ ರನ್ ಸಿಡಿಸಿದರು. ಇದಕ್ಕೆ ಪ್ರತಿಯಾಗಿ ಪಂಜಾಬ್ ತಂಡ , ೨೦ ಓವರ್ ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೮೫ ರನ್ ಗಳಿಸಲಷ್ಟೇ ಶಕ್ತಗೊಂಡಿತು.
ಆತಿಥೇಯ ಬೆಂಗಳೂರು ತಂಡದ ಪರ ವೇಗಿ ಉಮೇಶ್ ಯಾದವ್ ಗರಿಷ್ಠ ಮೂರು ವಿಕೆಟ್ ಪಡೆದರು. ಸಹಜವಾಗಿಯೇ ಎಬಿ ಡಿ ವಿಲಿಯರ್ಸ್ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಪ್ರಸಕ್ತ ಆವೃತ್ತಿಯಲ್ಲಿ ಸತತ ಸೋಲುಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿ ಹ್ಯಾಟ್ರಿಕ್ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಒಟ್ಟು ೮ ಅಂಕ ಕಲೆಹಾಕಿರುವ ಬೆಂಗಳೂರು ತಂಡ ಇದೇ ಮೊದಲ ಸ್ಥಾನಪಲ್ಲಟಗೊಂಡು ಅಂಕಪಟ್ಟಿಯಲ್ಲಿ ೭ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದು, ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿವೆ.
ಕೋಲ್ಕೊತಾದಲ್ಲಿ ಇಂದು ರಾತ್ರಿ ೮ ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಅಂಕಪಟ್ಟಿಯ ಆರನೇ ಸ್ಥಾನಿ ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ಕೆಳ ಸ್ಥಾನಿ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.