ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ ಬಿರುಸುಗೊಂಡ ಪ್ರಚಾರ

ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ೯ ರಾಜ್ಯಗಳನ್ನೊಳಗೊಂಡ ೭೧ ಲೋಕಸಭಾ ಕ್ಷೇತ್ರಗಳಿಗೆ ಬರುವ ಸೋಮವಾರ ಮತದಾನ ನಡೆಯಲಿದೆ.ವಿವಿಧ ರಾಜಕೀಯ ಪಕ್ಷಗಳ ತಾರಾ ಪ್ರಚಾರಕರು  ವಿವಿಧ ಭಾಗಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.ಹಿರಿಯ ಬಿಜೆಪಿ ಮುಖಂಡ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ನಿನ್ನೆ ಅಭ್ಯರ್ಥಿಗಳ ಪರ ಮತಯಾಚಿಸಿದರು. ಪ್ರಧಾನಿ ಇಂದು ಬಿಹಾರದ ದರ್ಭಂಗಾ ಮತ್ತು ಉತ್ತರ ಪ್ರದೇಶದ ಬಾಂಡಾದಲ್ಲಿ ಸಾರ್ವಜನಿಕ ರಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಅಪರಾಹ್ನ ವಾರಣಾಸಿಯಲ್ಲಿ ಪ್ರಧಾನಮಂತ್ರಿ ರೋಡ್ ಶೋ ನಡೆಸಲಿದ್ದಾರೆ.ವಾರಣಾಸಿಯ ಹಾಲಿ ಸಂಸದರಾಗಿರುವ ಪ್ರಧಾನಿ ನರೇಂದ್ರ ಮೋದಿ, ಈ ಕ್ಷೇತ್ರದಿಂದ ನಾಳೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೂಡ ಉತ್ತರ ಪ್ರದೇಶದ ಘಾಜಿಪುರ್ ಮತ್ತು ಉನ್ನಾವೊದಲ್ಲಿ ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ.ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,  ರಾಜಸ್ಥಾನದ ಜಾಲೋರ್ , ಅಜ್ಮೇರ್ ಮತ್ತು ಕೋಟಾದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್ ನಿನ್ನೆ ಉತ್ತರ ಪ್ರದೇಶದ ಲಖಿಂಪುರ್ , ಕಾನ್ಪುರ ಮತ್ತು ಉನ್ನಾವೊದಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಉತ್ತರ ಪ್ರದೇಶದ ಜಲೌನ್ ನಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ.ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಉತ್ತರ ಪ್ರದೇಶದ ಶಹಜಹನ್ ಪುರ್ ಮತ್ತು ಕನ್ನೌಜ್ ನಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿ ಭಾಷಣ ಮಾಡಲಿದ್ದಾರೆ.