ಸಂಬಂಧ ಬಲವರ್ಧನೆಗಾಗಿ ಭಾರತೀಯ ವಿದೇಶಾಂಗ ಸಚಿವರ ಶ್ರೀಲಂಕಾ ಭೇಟಿ

ದ್ವೀಪ ರಾಷ್ಟ್ರ ಶ್ರೀಲಂಕಾದ ಏಳನೇ ಕಾರ್ಯನಿರ್ವಾಹಕ  ಅಧ್ಯಕ್ಷರಾಗಿ ಆಯ್ಕೆಯಾದ ಗೋತಬಯಾ ರಾಜಪಕ್ಸೆ ಅವರನ್ನು ಭೇಟಿ ಮಾಡಲು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಕೊಲಂಬೊ ಪ್ರವಾಸ ಕೈಗೊಂಡಿದ್ದರು. ರಾಜಪಕ್ಸೆ ಅವರನ್ನು ಭೇಟಿ ಮಾಡಿದ ಅವರು ಭಾರತಕ್ಕೆ ಭೇಟಿ ಕೊಡುವಂತೆ ಪ್ರಧಾನ ಮಂತ್ರಿ ಆಹ್ವಾನ ನೀಡಿರುವ ವಿಚಾರವನ್ನು ತಿಳಿಸಿದರು. ಜೈ ಶಂಕರ್ ಅವರ ಆಹ್ವಾನವನ್ನು ಮನ್ನಿಸಿರುವ ಹೊಸದಾಗಿ ಚುನಾಯಿತರಾದ ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೋತಬಯಾ ರಾಜಪಕ್ಸೆ 2019ರ ನವೆಂಬರ 29ರಂದು ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇದು ಗೋತಬಯಾ ರಾಜಪಕ್ಸೆ ಅವರ ಮೊದಲ ಅಧಿಕೃತ ವಿದೇಶ ಪ್ರವಾಸವಾಗಿದೆ. ರಾಜಪಕ್ಸೆ ಅವರು ಆಯ್ಕೆಯಾದ ಕೂಡಲೇ ವಿದೇಶಾಂಗ ಸಚಿವರನ್ನು ಕಳುಹಿಸಿ ಆಮಂತ್ರಣ ನೀಡುವ ಮೂಲಕ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ಪರಸ್ಪರ ಲಾಭಕ್ಕಾಗಿ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಪಡಿಸಿಕೊಳ್ಳಲು ನವದೆಹಲಿ ಸಿದ್ಧವಾಗಿದೆ ಎಂಬ ಸಂದೇಶವನ್ನು ಭಾರತ ರವಾನಿಸಿದೆ. ಭಾರತ ಮಾತ್ರವಲ್ಲದೆ ಯುಎಸ್, ಪಾಕಿಸ್ತಾನ, ಇರಾನ್ ಮತ್ತು ಚೀನಾ ಕೂಡ ಗೋತಬಯ ರಾಜಪಕ್ಸೆ ಅವರಿಗೆ ಅಭಿನಂದನೆ ತಿಳಿಸಿವೆ. ಶ್ರೀಲಂಕಾ ಫಲಿತಾಂಶದ ಬಗ್ಗೆ ಜಾಗರೂಕವಾಗಿದ್ದ ಇಯು ದ್ವೀಪ-ರಾಷ್ಟ್ರದ ಮಾನವ ಹಕ್ಕುಗಳ ಬದ್ಧತೆಗಳನ್ನು ಕಾಪಾಡಿಕೊಳ್ಳುವಂತೆ ನೂತನ ಅಧ್ಯಕ್ಷರನ್ನು ಆಗ್ರಹ ಪಡಿಸಿದೆ.

ಗೋತಬಯ ರಾಜಪಕ್ಸೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಧಿಸಿರುವ ಈ ನಿರ್ಣಾಯಕ ವಿಜಯವು ಮುಂದೆ ಅವರ ಪಕ್ಷ ಶ್ರೀಲಂಕಾ ಪೊಡುಜಾನ ಪೆರುಮುನಾ (ಎಸ್‌ಎಲ್‌ಪಿಪಿ)‌ ದೇಶದ ಸಂಸತ್ತಿನಲ್ಲಿ ಅಧಿಕಾರ ಹಿಡಿಯುವುದಕ್ಕೂ  ಸಹಕರಿಯಾಗುವ ಸಾಧ್ಯತೆ ಇದೆ. ಗೋತಬಯ ರಾಜಪಕ್ಸೆ ಅವರ ಸಹೋದರ ಹಾಗೂ ಶ್ರೀಲಂಕಾದ ಮಾಜಿ ಅಧ್ಯಕ್ಷ  ಮಹಿಂದಾ ರಾಜಪಕ್ಸೆ ದೇಶದ ಪ್ರಧಾನ ಮಂತ್ರಿಯಾಗುವ ಸಾಧ್ಯತೆಗಳಿವೆ. ಅಂತಹ ಸಂದರ್ಭ ಎದುರಾಗಿದ್ದೇಯಾದರೆ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ತನ್ನ ಹಿತಾಸಕ್ತಿಗಳಿಗಾಗಿ ಮತ್ತು ಯುದ್ಧಾನಂತರದ ವರ್ಷಗಳಲ್ಲಿ ದೇಶದ ಜನಾಂಗೀಯ ಸಾಮರಸ್ಯಕ್ಕಾಗಿ ಭಾರತವೂ ಸೂಕ್ಷ್ಮ ಸಂವೇದನೆಯಿಲ್ಲದ ಸರ್ಕಾರದೊಂದಿಗೆ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಡುವೆ ಹಿಂದೆ ಈಲಂ ಯುದ್ಧದ ಸಮಯದಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿ ಗೋತಬಯಾ ರಾಜಪಕ್ಸೆ ಭಾರತೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು ಎಂಬುದು ಗಮನಾರ್ಹವಾದ ಸಂಗತಿಯಾಗಿದೆ. ಎಲ್‌ಟಿಟಿಇಯನ್ನು ಮಣಿಸುವುದಕ್ಕಾಗಿ ಶ್ರೀಲಂಕಾಕ್ಕೆ ಈ ಕಾರ್ಯವಿಧಾನವು‌ ಸಹಕಾರಿಯಾಗಿತ್ತು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಾಂಪ್ರದಾಯಿಕವಲ್ಲದ ಹೊಸ ರೀತಿಯ ಬೆದರಿಕೆಗಳು ಗೋಚರಿಸುತ್ತಿರುವುದರಿಂದ ಶ್ರೀಲಂಕಾ ಈ ಕಾರ್ಯವಿಧಾನವನ್ನು ಯಶಸ್ವಿ ಎಂದು ಪರಿಗಣಿಸುತ್ತದೆ ಮತ್ತು ಕೊಲಂಬೊದ ರಾಷ್ಟ್ರೀಯ ಭದ್ರತೆಯನ್ನು ಇದೇ ರೀತಿಯ ಕಾರ್ಯವಿಧಾನಗಳ ಮೂಲಕ ಬಲಪಡಿಸಬಹುದು ಎಂದು ಭಾರತದೊಂದಿಗೆ ಕೆಲಸ ಮಾಡುವ ನಿರೀಕ್ಷೆ ಹೊಂದಿದೆ.

ಶ್ರೀಲಂಕಾ ಪೊಡುಜಾನ ಪೆರುಮುನಾ ಪಕ್ಷದ ಪ್ರಣಾಳಿಕೆಯೇ ಈ ದೃಷ್ಟಿಕೋನವನ್ನು ಸಾರಿ ಹೇಳಿತ್ತು ಮತ್ತು ಶ್ರೀಲಂಕಾವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂಬ ವಾಗ್ದಾನ ನೀಡಿತ್ತು. ಪ್ರಾದೇಶಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ಕ್ ಹಾಗೂ ಬಿಮ್‌ಸ್ಟೆಕ್ ರಾಷ್ಟ್ರಗಳೊಂದಿಗೆ ತೊಡಗಿಸಿಕೊಳ್ಳುತ್ತದೆ ಎಂದು ಕೂಡ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸಾಮರಸ್ಯ ಮತ್ತು ಹೊಣೆಗಾರಿಕೆ ವಿಷಯಗಳ ಬಗ್ಗೆ ಯುಎನ್ ತೆಗೆದುಕೊಳ್ಳುವ ನಿರ್ಣಯಗಳಿಗೆ ಬದ್ದವಾಗಿರುವುದಿಲ್ಲ ಎಂಬ ಅಂಶವನ್ನು ಚುನಾವಣೆಗೂ ಮೊದಲೇ ಸ್ಪಷ್ಟಪಡಿಸಲಾಗಿದೆ. ಇದಲ್ಲದೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಯುಎನ್‌ನಲ್ಲಿ ಭಾರತ, ಶ್ರೀಲಂಕಾ ಸರ್ಕಾರವನ್ನು ಬೆಂಬಲಿಸಿತ್ತು. ಇಂಥ ವಿಶಿಷ್ಟ ಸನ್ನಿವೇಶ ಇರುವುದರಿಂದ ಈಗ ಭಾರತ ಮತ್ತು ಶ್ರೀಲಂಕಾ ದೇಶಗಳಿಗೆ ಸಂಕೀರ್ಣವಾದ ವಿಷಯಗಳ ಬಗ್ಗೆ ಹೊಸ ಸೂತ್ರವನ್ನು ರೂಪಿಸಬೇಕಾದ ಅಗತ್ಯವಿದೆ.

ಶ್ರೀಲಂಕಾದ ನೂತನ ಸರ್ಕಾರವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಂದರು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ವಿಷಯ ಮತ್ತು ಬಂದರು ಕರೆಗಳನ್ನು ಮೇಲ್ವಿಚಾರಣೆ ಮಾಡುವ ವಿಷಯಗಳಲ್ಲಿ ನವದೆಹಲಿಯ ಭದ್ರತಾ ಕಾಳಜಿಗಳಿಗೆ ಅನುಗುಣವಾಗಿ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಭಾರತ ನಿರೀಕ್ಷೆ ಮಾಡುತ್ತದೆ. ಚೀನಾದ ಬೆಲ್ಟ್ ಮತ್ತು ರಸ್ತೆ ಉಪಕ್ರಮವನ್ನು (ಬಿಆರ್ ಐ) ಅನುಷ್ಠಾನಗೊಳಿಸುವ ವಿಷಯದಲ್ಲಿ ಶ್ರೀಲಂಕಾವು ಭಾರತದ ಪ್ರಮುಖ ಪಾಲುದಾರ ದೇಶವಾಗಿದೆ. 2017ರಲ್ಲಿ ಅಂದಿನ ಸಿರಿಸೇನಾ ಅವರ ಸರ್ಕಾರವು ಹಮ್ಬೊಂಟೊಟಾ ಬಂದರನ್ನು ಚೀನಾಕ್ಕೆ 99 ವರ್ಷಗಳ ಕಾಲ ಗುತ್ತಿಗೆ ನೀಡಿದ ಕ್ರಮಕ್ಕೆ ಎಸ್‌ಎಲ್‌ಪಿಪಿ ಪಕ್ಷ ವಿರೋಧ ವ್ಯಕ್ತಪಡಿಸಿತ್ತು ಮತ್ತು ತಾನು ಅಧಿಕಾರಕ್ಕೆ ಬಂದರೆ ಈ ಒಪ್ಪಂದವನ್ನು ಹಿಂಪಡೆದುಕೊಳ್ಳುವ ಬಗ್ಗೆ ಪರಮಾರ್ಶೆ ನಡೆಸುವುದಾಗಿ ಅದು ಭರವಸೆ ನೀಡಿತ್ತು.

ಎಸ್‌ಎಲ್‌ಪಿಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ “ರಾಷ್ಟ್ರೀಯ ಆರ್ಥಿಕ ಪುನರುಜ್ಜೀವನ”ವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದೆ. ಇದರಲ್ಲಿ ಗ್ಯಾಲೆ, ಕಾಂಕೆಸಂತುರೈ ಮತ್ತು ತ್ರಿಕೋನಮಲೀ ಬಂದರುಗಳು ಹಾಗೂ ಮಟ್ಟಲಾ ಮತ್ತು ಕಟುನಾಯಕೆ ವಿಮಾನ ನಿಲ್ದಾಣಗಳ ಅಭಿವೃದ್ಧಿಯೂ ಒಳಪಟ್ಟಿವೆ. ಈ ವಾಗ್ದಾನವನ್ನು ಈಡೇರಿಸಲು ಶ್ರೀಲಂಕಾವು ಏಷ್ಯಾದ ನೆರೆಹೊರೆಯ ದೇಶಗಳ ಸಹಕಾರದ ನಿರೀಕ್ಷೆಯಲ್ಲಿದೆ. ಶ್ರೀಲಂಕಾದ ಈ ನಿರೀಕ್ಷೆಯಿಂದಾಗಿ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತಕ್ಕೆ ಅವಕಾಶಗಳು ಬರಬಹುದು.

ಹೊಸದಾಗಿ ಆಯ್ಕೆಯಾದ ಗೋತಬಯಾ ರಾಜಪಕ್ಸೆ ಅವರನ್ನು ಅಭಿನಂದಿಸಿ ಮಾತನಾಡಿರುವ ಚೀನಾ ಅಧ್ಯಕ್ಷರು, ‘ಬಿಆರ್‌ಐ ಅಡಿಯಲ್ಲಿ ದ್ವಿಪಕ್ಷೀಯ ಸಮಸ್ಯೆಗಳು ಮತ್ತು ಉತ್ತಮ-ಗುಣಮಟ್ಟದ ಯೋಜನೆಗಳಲ್ಲಿ ಹೆಚ್ಚಿನ ಪ್ರಗತಿಗಾಗಿ’ ಅವರೊಂದಿಗೆ ಕೆಲಸ ಮಾಡಲು ಸಿದ್ಧ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಹೊಸ ಸರ್ಕಾರವು ಚೀನಾ ಅಭಿವೃದ್ಧಿಪಡಿಸಿದ ಯೋಜನೆಗಳ ಬಗ್ಗೆ ಮೊದಲಿನ ನಿರ್ಧಾರಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ. ಏಕೆಂದರೆ ಸಾಲದ ಹೊರೆಯ ಹೊರತಾಗಿಯೂ ಚೀನಾವು ಶ್ರೀಲಂಕಾದ ಮಹತ್ವದ ಅಭಿವೃದ್ಧಿ ಮತ್ತು ಕಾರ್ಯತಂತ್ರದ ಪಾಲುದಾರ ದೇಶವಾಗಿದೆ. ಬಗಲಲ್ಲಿರುವ ದೇಶವಾಗಿ ಭಾರತವು ಚೀನಾದ ಬಿಆರ್ ಐ ಬಗ್ಗೆ ಆಸಕ್ತಿ ತೋರಿಸಿಲ್ಲ ಜೊತೆಗೆ ಆ ಯೋಜನೆಯ ಕೆಲವೊಂದು ಪ್ಯಾಕ್ಚುಯಲ್ ವಿಷಯಗಳ ಬಗ್ಗೆ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ.

2015ರಿಂದ ಯುನಿಟಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ತೆಗೆದುಕೊಂಡ ನೀತಿ ನಿರ್ಧಾರಗಳು ಜನರಿಗೆ ತಲುಪಿಲ್ಲ ಅಥವಾ ಅವುಗಳಿಗೆ ಜನ ಮನ್ನಣೆ ಇರಲಿಲ್ಲ ಎಂಬುದು ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಂದಿರುವ ಫಲಿತಾಂಶದಿಂದ ಋಜುವಾತಾಗಿದೆ. ರಾಜಕೀಯ, ಆರ್ಥಿಕ, ಭದ್ರತೆ ಮತ್ತು ವಿದೇಶಾಂಗ ನೀತಿ ಕ್ಷೇತ್ರಗಳಲ್ಲಿ ಈಗ ಹೊಸ ಸರ್ಕಾರ ಬಂದಿರುವುದರಿಂದ ಬದಲಾವಣೆ ಆಗಲಿವೆ. ಹೊಸ ಸರ್ಕಾರ ರಚನೆಯಾಗುವುದರಿಂದ ಉಂಟಾಗಬಹುದಾದ ಹೊಸ ಅವಕಾಶಗಳು ಮತ್ತು ಸವಾಲುಗಳನ್ನು ಭಾರತವು ಎದುರು ನೋಡಬೇಕು. ಶ್ರೀಲಂಕಾವು ಹೊಸ ನಾಯಕತ್ವದ ಮೇಲೆ ಬಹಳ ನಿರೀಕ್ಷೆ ಹೊಂದಿದೆ. ಮುಂದಿನ ವಾರ ನಡೆಯುವ ಶ್ರೀಲಂಕಾ ಅಧ್ಯಕ್ಷರ ಭಾರತದ ಭೇಟಿಯು ಭವಿಷ್ಯದಲ್ಲಿ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧ ಮತ್ತು ಪ್ರಾದೇಶಿಕ ಸಹಕಾರ ಉಜ್ವಲಗೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

 
ಸ್ಕ್ರಿಪ್ಟ್: ಡಾ. ಎಂ. ಸಮತಾ, ಕಾರ್ಯತಂತ್ರದ ವಿಶ್ಲೇಷಕ