ಜಪಾನ್‌ನಲ್ಲಿ ನಡೆದ ಜಿ -20 ವಿದೇಶಾಂಗ ಸಚಿವರ ಸಭೆ

ಜಿ -20 ಎಂಬುದು ಜಗತ್ತಿನ ಮುಖ್ಯವಾದ 20 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯುಳ್ಳ‌ ದೇಶಗಳ ವೇದಿಕೆಯಾಗಿದೆ; ಇದು 19 ಸದಸ್ಯ ರಾಷ್ಟ್ರಗಳನ್ನು ಹಾಗೂ ಯುರೋಪಿಯನ್ ಒಕ್ಕೂಟವೊಂದನ್ನು ಒಳಗೊಂಡಿದೆ. ಈ ವರ್ಷದ ಜೂನ್ ಕೊನೆಯಲ್ಲಿ ಒಸಾಕಾದಲ್ಲಿ 14ನೇ ಶೃಂಗಸಭೆ ನಡೆದ ಬಳಿಕ ಜಪಾನ್ ದೇಶವು ಇದರ ಮುಂದುವರೆದ ಭಾಗವಾಗಿ ನಾಗೋಯಾ ನಗರದಲ್ಲಿ ವಿದೇಶಾಂಗ ಮಂತ್ರಿಗಳ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಭಾರತವನ್ನು ಪ್ರತಿನಿಧಿಸಿದ್ದರು. ವಿದೇಶಾಂಗ ಮಂತ್ರಿಗಳ ಈ ಸಭೆಯು ಮುಚ್ಚಿದ ಬಾಗಿಲಲ್ಲಿ ನಡೆದ ಅಧಿವೇಶನವಾಗಿತ್ತು; ಅಲ್ಲಿ ಸದ್ಯದ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಜಾಗತಿಕ ಆರ್ಥಿಕತೆ ಹಿಂಜರಿತದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ  ವಿದೇಶಾಂಗ ಸಚಿವರು ಸಮಾಲೋಚನೆ ನಡೆಸಿದರು.

ಸಭೆಯ ಬಳಿಕ‌ ಮಾತನಾಡಿದ ಜಿ -20 ವಿದೇಶಾಂಗ ಸಚಿವರ ಸಭೆಯ ಅಧ್ಯಕ್ಷರೂ ಆಗಿದ್ದ ಜಪಾನ್ ವಿದೇಶಾಂಗ ಸಚಿವ ತೋಶೆಮಿಟ್ಸು ಮೊಟೆಗಿ, ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ)ಯಲ್ಲಿ ಸುಧಾರಣೆ ತರಬೇಕಾಗಿರುವ ತುರ್ತು ಅಗತ್ಯದ ಬಗ್ಗೆ ಜಿ -20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು. ಈ ರೀತಿಯ ಸುಧಾರಣೆ ತರುವುದರಿಂದ ವಿಶ್ವ ಸಂಸ್ಥೆಯು ಹಲವು ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಸದಸ್ಯ ರಾಷ್ಟ್ರಗಳು ವಿಶ್ವ ವಾಣಿಜ್ಯ ಸಂಸ್ಥೆಯು ತನ್ನ ವಿವಾದ ಇತ್ಯರ್ಥ ಮಾಡುವ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಬಯಸುತ್ತವೆ. ಇದರ ಬಗ್ಗೆ ಒಸಾಕಾದಲ್ಲಿ ನಡೆದ ರಾಜ್ಯಗಳ ಮುಖ್ಯಸ್ಥರ ಶೃಂಗಸಭೆಯ ಸಂದರ್ಭದಲ್ಲಿ ಚರ್ಚೆ ಮಾಡಲಾಯಿತು. ಭಾರತವೂ ಸೇರಿದಂತೆ ಎಲ್ಲಾ 16 ಮೂಲ‌ ಸದಸ್ಯ ರಾಷ್ಟ್ರಗಳು ಇದನ್ನು ಅಂತಿಮಗೊಳಿಸಲು ಮತ್ತು ತೀರ್ಮಾನಿಸಲು ಒಪ್ಪಿಗೆ ಸೂಚಿಸಿವೆ. ಅದಕ್ಕಾಗಿ ಉದ್ದೇಶಿತ ಏಷ್ಯಾ ಪೆಸಿಫಿಕ್ ಮುಕ್ತ ವ್ಯಾಪಾರ ಒಪ್ಪಂದದ (ಎಪಿಎಫ್‌ಟಿಎ) ಮಾತುಕತೆಗಳನ್ನು ಆರಂಭಿಸುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಪ್ರಚಲಿತ ವಿಷಯಗಳ ಬಗ್ಗೆ ವಿದೇಶಾಂಗ ಮಂತ್ರಿಗಳು ತಮ್ಮ ಅಧಿಕೃತ ನಿಲುವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಹಾಗಂತ ಯಾವುದೇ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.

ವಿಶೇಷವೆಂದರೆ‌ ಭಾರತವು ಮೂರು ವರ್ಷಗಳ ಬಳಿಕ ಜಿ -20 ಶೃಂಗಸಭೆಯ ಆತಿಥ್ಯ ವಹಿಸುವ ಗೌರವವನ್ನು ತನ್ನದಾಗಿಸಿಕೊಂಡಿದೆ. ವಿಶ್ವದ ಆರ್ಥಿಕತೆ ಬೆಳವಣಿಗೆ ದೃಷ್ಟಿಯಿಂದ 2022ರ ಜಿ -20 ಶೃಂಗಸಭೆಯ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾರತದ ಪಾತ್ರ ಹೇಗಿರುತ್ತದೆಂದು ಜಗತ್ತಿನ ಪ್ರಮುಖ ಆರ್ಥಿಕ ಸಂಸ್ಥೆಗಳು ಬಹಳ ಸೂಕ್ಷ್ಮವಾಗಿ ಗಮನಿಸಲಿವೆ.

1999ರಲ್ಲಿ ಸ್ಥಾಪನೆಯಾದ ಜಿ -20 ಕೂಟವನ್ನು 2008ರಲ್ಲಿ ಉದ್ಭವಿಸಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ವೇದಿಕೆಯಿಂದ ರಾಜ್ಯಗಳ ಮುಖ್ಯಸ್ಥರ ಸ್ಥಾನಕ್ಕೆ ಏರಿಸಲಾಯಿತು. ಇದು ಆಗಿದ್ದು 2008ರಲ್ಲಿಯೇ. ಅಂದಿನಿಂದ ಜಿ-20ಯು ಜಾಗತಿಕ ಅಂತರರಾಷ್ಟ್ರೀಯ ಆರ್ಥಿಕ ಸಹಕಾರದ ವೇದಿಕೆಯಾಗಿ ಹೊರಹೊಮ್ಮಿದೆ. ಜಿ -20 ಸದಸ್ಯರು ಜಾಗತಿಕ ಒಟ್ಟು ದೇಶೀಯ ಉತ್ಪನ್ನದ ಸುಮಾರು 85 ಪ್ರತಿಶತ, ಜಾಗತಿಕ ವ್ಯಾಪಾರದ 75 ಪ್ರತಿಶತ ಹಾಗೂ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಪ್ರತಿನಿಧಿಸುತ್ತಾರೆ. ಇದುವರೆಗೆ ನಡೆದಿರುವ ಎಲ್ಲಾ ಜಿ -20 ಶೃಂಗಸಭೆಗಳಲ್ಲಿ ಭಾರತ ಭಾಗವಹಿಸಿದ್ದು, ಈಗ ಸ್ವದೇಶದಲ್ಲಿ 17ನೇ ಜಿ -20 ಶೃಂಗಸಭೆಯನ್ನು ಆಯೋಜಿಸಲು ಎದುರು ನೋಡುತ್ತಿದೆ.

ಸುಂಕದ ವಿಷಯಕ್ಕೆ ಸಂಬಂಧಿಸಿದಂತೆ ಯುಎಸ್-ಚೀನಾ ನಡುವೆ ನಡೆದ ಯುದ್ಧದ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ನಡೆದ ಒಸಾಕಾ ಶೃಂಗಸಭೆಯ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ನಾಗೋಯಾದಲ್ಲಿ ನಡೆದ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಇಂಧನ ಸುರಕ್ಷತೆ, ಆರ್ಥಿಕ ಸ್ಥಿರತೆ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ, ಸುಧಾರಿತ ಬಹುಪಕ್ಷೀಯತೆ, ಡಬ್ಲ್ಯುಟಿಓ ಸುಧಾರಣೆಗಳು, ಭಯೋತ್ಪಾದನೆಯನ್ನು ಎದುರಿಸುವಿಕೆ, ಆರ್ಥಿಕ ಅಪರಾಧಿಗಳ ವಾಪಸಾತಿ, ಆಹಾರ ಸುರಕ್ಷತೆ, ತಂತ್ರಜ್ಞಾನಗಳ ಪ್ರಜಾಪ್ರಭುತ್ವೀಕರಣ ಮತ್ತು ಪೋರ್ಟಬಲ್ ಸಾಮಾಜಿಕ ಭದ್ರತಾ ಯೋಜನೆಗಳು ಭಾರತಕ್ಕೆ ಪ್ರಾಮುಖ್ಯತೆಯ ವಿಷಯಗಳಾಗಿದ್ದವು. ಯುಎಸ್ ವಿದೇಶಾಂಗ ಕಾರ್ಯದರ್ಶಿಯ ಅನುಪಸ್ಥಿತಿಯಲ್ಲಿ ಕೆಲವು ಸದಸ್ಯ ರಾಷ್ಟ್ರಗಳು ಹೆಚ್ಚುತ್ತಿರುವ ರಕ್ಷಣಾವಾದ ಮತ್ತು ಏಕಪಕ್ಷೀಯ ನಿರ್ಬಂಧಗಳ ಬಗ್ಗೆ ವಿಷಯ ಪ್ರಸ್ತಾಪಿಸಿದವು.

ಈ ಸಭೆಯಲ್ಲಿ ಭೌಗೋಳಿಕ ರಾಜಕೀಯ ಹಾಗೂ ವ್ಯಾಪಾರದ ಉದ್ವಿಗ್ನತೆ ಮತ್ತು ಸುಸ್ಥಿರ ಅಭಿವೃದ್ಧಿಯ ಕಡೆ ಸಾಗುವಂತಹ ಪ್ರಗತಿಯ ಬಗ್ಗೆ ಚರ್ಚೆ ಮಾಡಲಾಯಿತು. ವಿಶ್ವ ವಾಣಿಜ್ಯ ಸಂಸ್ಥೆಯು ಮಂಡಿಸಿದ್ದ ವಿವಾದಾತ್ಮಕ ಸುಧಾರಣೆಗಳನ್ನೊಳಗೊಂಡ ಪ್ರಸ್ತಾಪಗಳ ಬಗ್ಗೆ ಚರ್ಚಿಸಲು ಭಾಗವಹಿಸುವವರಿಗೆ ಈ ಸಭೆ ಉತ್ತಮ ಅವಕಾಶವನ್ನು ಒದಗಿಸಿ‌ ಕೊಟ್ಟಿತು.

ಜಿ -20 ವಿದೇಶಾಂಗ ಮಂತ್ರಿಗಳ ಅಧಿವೇಶನದ ಸೈಡ್ ಲೈನ್ ಸಭೆಯಲ್ಲಿ ಭಾರತ ವಿದೇಶಾಂಗ ಸಚಿವರು ಚೀನಾ, ಜಪಾನ್, ಕೊರಿಯಾ ಗಣರಾಜ್ಯ, ನೆದರ್‌ಲ್ಯಾಂಡ್ಸ್, ಸ್ಪೇನ್, ಸಿಂಗಾಪುರ್, ಆಸ್ಟ್ರೇಲಿಯಾ, ಚಿಲಿ ಮತ್ತು ಫ್ರಾನ್ಸ್ ವಿದೇಶಾಂಗ ಮಂತ್ರಿಗಳೊಂದಿಗೆ ಮಹತ್ವದ ಸಂವಾದವನ್ನು  ನಡೆಸಿದರು.

ಡಾ. ಜೈಶಂಕರ್ ಅವರು ಫ್ರೆಂಚ್ ವಿದೇಶಾಂಗ ಸಚಿವರೊಂದಿಗೆ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಭೂದೃಶ್ಯವನ್ನು ಒಳಗೊಂಡ ವ್ಯಾಪಕವಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಸ್ಪ್ಯಾನಿಷ್ ದೇಶದ ವಿದೇಶಾಂಗ ಸಚಿವರ ಜೊತೆ ಯುರೋಪಿಯನ್ ಒಕ್ಕೂಟದೊಂದಿಗೆ ಭಾರತದ ಸಂಬಂಧಗಳ ಭವಿಷ್ಯದ ಬಗ್ಗೆ ಭಾರತೀಯ ವಿದೇಶಾಂಗ ಸಚಿವರು ಚರ್ಚಿಸಿದರು. ಪರಸ್ಪರ ಸಹಕಾರದ ವಿಸ್ತರಣೆಗೆ ಭೂಮಿಕೆ ಸಿದ್ಧಪಡಿಸಲು ಅವರು ಚಿಲಿಯ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಿದರು. ಕಡೆಗೆ ಡಾ. ಜೈಶಂಕರ್ ಅವರು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಮುಂಬರುವ ಭಾರತ ಪ್ರವಾಸದ ಬಗ್ಗೆ ಅಲ್ಲಿನ ವಿದೇಶಾಂಗ ಸಚಿವ ಮಾರಿಸ್ ಪೈನ್ ಅವರ ಜೊತೆ ಮಾತುಕತೆ ನಡೆಸಿದರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾಳಜಿಯನ್ನೊಳಗೊಂಡ ವಿಷಯಗಳ ಬಗ್ಗೆ ತನ್ನ ದೃಷ್ಟಿಕೋನಗಳನ್ನು ವ್ಯಕ್ತಪಡಿಸಲು ಜಿ -20 ಸಭೆಯು ಭಾರತಕ್ಕೆ ಸುಸಂದರ್ಭವೊಂದನ್ನು ಒದಗಿಸಿಕೊಟ್ಟಿತು.

ಸ್ಕ್ರಿಪ್ಟ್: ರಂಜಿತ್ ಕುಮಾರ್, ರಾಜತಾಂತ್ರಿಕ ಸಂಪಾದಕ, ನವೋದಯ ಟೈಮ್ಸ್