ಮೊದಲ ಭಾರತ-ಜಪಾನ್‌ 2+2 ಸಚಿವರ ಸಭೆ

ಮೊದಲ ಭಾರತ-ಜಪಾನ್ 2 + 2 ವಿದೇಶಿ ಮತ್ತು ರಕ್ಷಣಾ ಸಚಿವರ ಸಭೆ ನವದೆಹಲಿಯಲ್ಲಿ ನಡೆಯಿತು. ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ತೋಷಿಮಿಟ್ಸು ಮೊಟೆಗಿ ಮತ್ತು ಜಪಾನ್‌ನ ರಕ್ಷಣಾ ಸಚಿವ ತಾರೊ ಕೊನೊ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿದರು. 2 + 2 ಭೇಟಿಯು ದ್ವಿಪಕ್ಷೀಯ ಸಂಬಂಧದಲ್ಲಿ ಸುಧಾರಣೆ ಮತ್ತು ರಕ್ಷಣಾ ಮತ್ತು ಕಾರ್ಯತಂತ್ರದ ಸಂಬಂಧಗಳ ಗಾಢವಾಗುವುದನ್ನು ಸೂಚಿಸುತ್ತದೆ. ಇಂಡೋ-ಜಪಾನ್ ಕಾರ್ಯತಂತ್ರದ ಸಹಭಾಗಿತ್ವವು 2000ನೇ ಇಸವಿಯಿಂದ ಎರಡು ದೇಶಗಳ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. 2010ರಿಂದ ಸಭೆಯನ್ನು ಸೆಕ್ರೆಟರಿಯಲ್ ಮಟ್ಟದಲ್ಲಿ ಇರಿಸಲಾಗಿತ್ತು. ಈಗ ಸಚಿವರ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗಿದೆ.

ಈ ರೀತಿಯ ದ್ವಿಪಕ್ಷೀಯ ಸಭೆಯನ್ನು ಮೊದಲು ಪ್ರಸ್ತಾಪಿಸಿದ್ದು ಮಾಜಿ ಪ್ರಧಾನಿ ಎ ಬಿ ವಾಜಪೇಯಿ. ಜಪಾನಿನ ಮಾಜಿ ಪ್ರಧಾನಿ ಯೋಶಿರೋ ಮೋರಿ ಅವರ ಅಧಿಕಾರಾವಧಿಯಲ್ಲಿ 2000-2001ರಲ್ಲಿ ಮೊದಲ ಸಭೆ ನಡೆದಿತ್ತು.

ಭಾರತ-ಜಪಾನ್‌ ಜಂಟಿ ಹೇಳಿಕೆಯಲ್ಲಿ, ನವದೆಹಲಿ ಮತ್ತು ಟೋಕಿಯೊ ಎರಡೂ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಿದ್ದಾರೆ ಎಂದು ಹೇಳಲಾಯಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ (ಯುಎನ್‌ಎಸ್‌ಸಿಆರ್) ಅನುಸಾರವಾಗಿ ಎಲ್ಲಾ ಶ್ರೇಣಿಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸುವಂತೆಯೂ ಉತ್ತರ ಕೊರಿಯಾವನ್ನು ಕೇಳಲಾಗಿದೆ.

ಇಂಡೋ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಈ ತಿಂಗಳ ಕೊನೆಯಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಭಾರತ ಭೇಟಿಗೆ ಪೂರ್ವಾಭಾವಿಯಾಗಿ 2 + 2 ಮಂತ್ರಿಮಂಡಲ ಭಾರತಕ್ಕೆ ಭೇಟಿ ನೀಡಿತು. ವಾರ್ಷಿಕ ಶೃಂಗಸಭೆ 2014 ರಿಂದ ಕ್ರಮೇಣವಾಗಿ ಬೆಳೆದು ಬಂದಿದೆ. ಮೊದಲ ಬಾರಿಗೆ, ಇಂಡೋ-ಜಪಾನೀಸ್ ದ್ವಿಪಕ್ಷೀಯ ಸಂಬಂಧಗಳಿಗೆ 2006ರಲ್ಲಿ ಉತ್ತೇಜನ ನೀಡಲಾಯಿತು. ನಂತರ 2007 ರಲ್ಲಿ ಜಂಟಿ ಮಿಲಿಟರಿ ಸಮರಾಭ್ಯಾಸ; ಅದರಲ್ಲಿ ಮಲಬಾರ್ ಅಭ್ಯಾಸ ಪ್ರಮುಖ ಭಾಗವಾಗಿದೆ. ಜಪಾನ್ 2015 ರಿಂದ ಮಲಬಾರ್ ಈ ಸಮರಾಭ್ಯಾದಲ್ಲಿ ಸದಸ್ಯರಾಗಿ ಭಾಗವಹಿಸುತ್ತಿದೆ.

ಕಳೆದ ವರ್ಷ, ಭಾರತೀಯ ಸೇನೆ ಮತ್ತು ಜಪಾನ್‌ನ ಭೂ ಸೇನಾ ಪಡೆಗಳು ಮೊದಲ ಬಾರಿಗೆ ಜಂಟಿ ಸಮರಾಭ್ಯಾಸ ನಡೆಸಿದ್ದವು. ಜಂಟಿ ವಾಯುಪಡೆಯ ರಕ್ಷಣಾ ಅಭ್ಯಾಸಕ್ಕಾಗಿ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ 2 + 2 ಮಂತ್ರಿಗಳ ಸಭೆಯಲ್ಲಿಯೂ ಚರ್ಚಿಸಲಾಯಿತು. ಈ ಯುದ್ಧ ವಿಮಾನ ಸಮರಾಭ್ಯಾಸ ಶೀಘ್ರದಲ್ಲೇ ಆರಂಭಗೊಳ್ಳುವ ನಿರೀಕ್ಷೆಯಿದೆ.

ಜಪಾನ್ ಆರು ದೇಶಗಳೊಂದಿಗೆ ಮಂತ್ರಿ ಮಟ್ಟದಲ್ಲಿ 2 + 2 ಸಭೆ ನಡೆಸುತ್ತಿದೆ. ಯುಎಸ್ ಮತ್ತು ಜಪಾನ್‌ನೊಂದಿಗೆ ಮಾತ್ರ ಭಾರತ ಈ ಸ್ವರೂಪದ ಸಭೆಯಲ್ಲಿ ತೊಡಗಿದೆ. ಆದಾಗ್ಯೂ, ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಯುಎನ್‌ಜಿಎಯ ಸಭೆಯ ಜತೆಗೆ ಯುಎಸ್, ಭಾರತ ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಮಂತ್ರಿಗಳು ಚತುಷ್ಪಥ (ಕ್ವಾಡ್) ಮಾತುಕತೆಗಾಗಿ ನ್ಯೂಯಾರ್ಕ್‌ನಲ್ಲಿ ಭೇಟಿಯಾದರು. ಸುಮಾರು ಹದಿನೈದು ದಿನಗಳ ಹಿಂದೆ, ಕ್ವಾಡ್‌ನ ಎಲ್ಲಾ ನಾಲ್ಕು ದೇಶಗಳು ಭಯೋತ್ಪಾದನೆ ನಿಗ್ರಹದ ಬಗ್ಗೆ ತಮ್ಮ ಮೊದಲ ಪ್ರಾಯೋಗಿಕ ಟೇಬಲ್-ಟಾಪ್ ಅಭ್ಯಾಸ ನಡೆಸಿದ್ದವು. ಇದರಿಂದಾಗಿ ಕ್ವಾಡ್ ಗುಂಪಿಗೆ ಹೆಚ್ಚಿನ ಒತ್ತು ಸಿಕ್ಕಿದೆ.

ಇಂಡೋ-ಪೆಸಿಫಿಕ್ನಲ್ಲಿ ಶಾಂತಿ ಕಾಪಾಡುವ ಬಗ್ಗೆ ಮಾತುಕತೆಗಳಲ್ಲಿ ಚರ್ಚಿಸಲಾಗಿದೆ.. ಇದು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಈ ವರ್ಷ ಬ್ಯಾಂಕಾಕ್‌ನಲ್ಲಿ ಪ್ರಧಾನಿ ಮೋದಿಯವರ ಭಾಷಣದಲ್ಲೂ ಉಲ್ಲೇಖಗೊಂಡಿತ್ತು. ಅಲ್ಲಿ ಅವರು “ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ”, ಶಾಂತಿ ಮತ್ತು ಸ್ಥಿರತೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದರು.

ಹೈಸ್ಪೀಡ್ ರೈಲುಗಳಂತಹ ಅನೇಕ ಯೋಜನೆಗಳೊಂದಿಗೆ ಇಂಡೋ-ಜಪಾನ್ ಸಂಬಂಧ ಬೆಳೆಯುತ್ತಿದೆ. ಅನೇಕ ರಕ್ಷಣಾ ಯೋಜನೆಗಳ ಹಿನ್ನೆಲೆಯಲ್ಲಿ ಈ ನಂಬಿಕೆ ಇನ್ನಷ್ಟು ಆಳವಾಗುತ್ತಿದೆ. 2 + 2 ಮಂತ್ರಿಮಂಡಲದ ಸಭೆಯಲ್ಲಿ, ಸ್ವಾಧೀನ ಮತ್ತು ಕ್ರಾಸ್‌ ಸರ್ವಿಸಿಂಗ್ ಒಪ್ಪಂದದ (ಎಸಿಎಸ್ಎ) ಮಾತುಕತೆಗಳ ಆರಂಭಿಕ ತೀರ್ಮಾನಕ್ಕೆ ಎರಡೂ ಕಡೆಯವರು‌ ಆಶಯ ವ್ಯಕ್ತಪಡಿಸಿದರು. ಇದು ಎರಡೂ ಕಡೆಯವರ ನಡುವೆ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಮತ್ತಷ್ಟು ಕೊಡುಗೆ ನೀಡುತ್ತದೆ. 2018ರ ಡಿಸೆಂಬರ್‌ನಲ್ಲಿ ಭಾರತ ಪ್ರಾರಂಭಿಸಿದ ಗುರುಗ್ರಾಮ್ ಮೂಲದ ಮಾಹಿತಿ ಫ್ಯೂಷನ್ ಸೆಂಟರ್, ಹಿಂದೂ ಮಹಾಸಾಗರ ಪ್ರದೇಶ (ಐಎಫ್‌ಸಿ-ಐಒಆರ್)ದಲ್ಲಿ ಜಪಾನಿನ ಸಂಪರ್ಕ ಅಧಿಕಾರಿಯನ್ನು ನೇಮಿಸಲಾಗುವುದು.

2 + 2 ಮಂತ್ರಿಮಂಡಲವು 2010 ರಲ್ಲಿ ಪ್ರಾರಂಭವಾದ ಚತುರ್ಭುಜ ಆಳ ರಕ್ಷಣಾ ತಂತ್ರಜ್ಞಾನ ಸಹಕಾರಕ್ಕೆ ಆದ್ಯತೆ ನೀಡಿದೆ. ಇದು ರೊಬೊಟಿಕ್ಸ್ ಮತ್ತು ಮಾನವರಹಿತ  ವಾಹನದಂತಹ ತಂತ್ರಜ್ಞಾನಗಳ ಹಂಚಿಕೆಯನ್ನು ಹೆಚ್ಚಿಸಿದೆ. ಭಾರತದ ಡಿಆರ್‌ಡಿಒ ತನ್ನ ಜಪಾನಿನ ಪ್ರತಿರೂಪದೊಂದಿಗೆ ಹಲವಾರು ವಿಷಯಗಳ ಕುರಿತು ಸಹಕರಿಸುತ್ತಿದೆ.

ದಕ್ಷಿಣ ಚೀನಾ ಸಮುದ್ರದ ಬಗ್ಗೆಯೂ 2 + 2 ಮಂತ್ರಿಮಂಡಲದ ಸಭೆಯಲ್ಲಿ ಪ್ರಸ್ತಾಪ ಮಾಡಲಾಯಿತು. ನೇವಿಗೇಷನ್ ಸ್ವಾತಂತ್ರ್ಯದ ಪ್ರಾಮುಖ್ಯತೆ, ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ ಮತ್ತು ಕಾನೂನು, ರಾಜತಾಂತ್ರಿಕ ಪ್ರಕ್ರಿಯೆಗಳಿಗೆ ಮನ್ನಣೆ ನೀಡುವುದು ಸೇರಿದಂತೆ ಎಲ್ಲಾ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಬೇಕೆಂದು ಚರ್ಚಿಸಲಾಯಿತು.

ಲೇಖನ : ಸುಮನ್‌ ಶರ್ಮ, ಪತ್ರಕರ್ತರು