ಭಾರತಕ್ಕೆ ಶ್ರೀಲಂಕಾ ವಿದೇಶಾಂಗ ಸಚಿವರ ಚೊಚ್ಚಲ ವಿದೇಶ ಪ್ರವಾಸ

ಶ್ರೀಲಂಕಾದ ವಿದೇಶಾಂಗ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಹಾಗೂ ಕಾರ್ಮಿಕ ಸಚಿವ ದಿನೇಶ್ ಗುಣವರ್ಧನ ಭಾರತಕ್ಕೆ ಮೊದಲ ಅಧಿಕೃತ ವಿದೇಶ ಪ್ರವಾಸ ಕೈಗೊಂಡಿದ್ದರು. ಅವರೊಂದಿಗೆ ನಾಲ್ಕು ಸದಸ್ಯರ ಉನ್ನತ ಮಟ್ಟದ ನಿಯೋಗ ಕೂಡ ಇತ್ತು. ಇದು 2019ರ ನವೆಂಬರ್‌ನಲ್ಲಿ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಭಾರತ ಭೇಟಿಯ ಮುಂದುವರಿದ ಭಾಗವಾಗಿದೆ. ಭೇಟಿ ಸಂದರ್ಭದಲ್ಲಿ ಗುಣವರ್ಧನ ಅವರು ಭಾರತೀಯ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರ ನಾಥ್ ಪಾಂಡೆ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಸೇರಿದಂತೆ ವಿದೇಶಾಂಗ ಸಚಿವಾಲಯಗಳ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್ಐಸಿಸಿಐ) ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ನವದೆಹಲಿ ಮೂಲದ ಸಾರ್ವಜನಿಕ ಹಿತಾಸಕ್ತಿ ಸಂಶೋಧನೆ ಮತ್ತು ವಕಾಲತ್ತು ಸಂಸ್ಥೆಯಾದ ವಿಜ್ಞಾನ ಮತ್ತು ಪರಿಸರ ಕೇಂದ್ರ ಮತ್ತು ಮಹಾಬೋಧಿ ಸೊಸೈಟಿ ಆಫ್ ಇಂಡಿಯಾದ ನವದೆಹಲಿ ಕೇಂದ್ರಕ್ಕೆ ಭೇಟಿ ನೀಡಿದರು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ನಡೆಸಿದ ನಿಯೋಗ ಮಟ್ಟದ ಮಾತುಕತೆ ಸಂದರ್ಭದಲ್ಲಿ ಎರಡೂ ದೇಶಗಳ ಸಚಿವರು ಹೂಡಿಕೆ, ಭದ್ರತೆ, ಮೀನುಗಾರಿಕೆ, ಅಭಿವೃದ್ಧಿ ನೆರವು, ಚಾಲ್ತಿಯಲ್ಲಿರುವ ಯೋಜನೆಗಳು, ಪ್ರವಾಸೋದ್ಯಮ, ಶಿಕ್ಷಣ ಹಾಗೂ ಸಾಂಸ್ಕೃತಿಕ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಹರವಿನ ಬಗ್ಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಭಾರತ ಮತ್ತು ಶ್ರೀಲಂಕಾ ನಡುವಿನ ನಿಕಟ ಮತ್ತು ಸ್ನೇಹ ಸಂಬಂಧವನ್ನು ಬಲಪಡಿಸುವ ಮತ್ತಷ್ಟು ಮಾರ್ಗಗಳನ್ನು ಹುಡುಕುವ ಬಗ್ಗೆ ಪರಮಾರ್ಶೆ ನಡೆಸಿದರು‌. ರಾಜಪಕ್ಸೆ ಅವರ ಚೊಚ್ಚಲ ಭೇಟಿ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ, ವೃತ್ತಿಪರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಸಹಕಾರ ನೀಡಿದ ಭಾರತದ ಕ್ರಮವನ್ನು ಸ್ಮರಿಸಿ ಮುಂದುವರಿದ ಬೆಂಬಲವನ್ನು ಕೋರಿದರು. ಈ ಪ್ರದೇಶಗಳಲ್ಲಿನ ಸಾಮರ್ಥ್ಯ ಹಾಗೂ ಶ್ರೀಲಂಕಾದ ಅವಶ್ಯಕತೆಗಳನ್ನು ಆಧರಿಸಿ ಮಾನ್ಯತೆ ಪಡೆದ ತನ್ನ ಸಂಸ್ಥೆಗಳ ಮೂಲಕ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಡಾ. ಜೈಶಂಕರ್ ಭರವಸೆ ನೀಡಿದರು. ಎರಡೂ ದೇಶದ ವಿದೇಶಾಂಗ ಸಚಿವರು ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ಕ್ಷೇತ್ರಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಎರಡೂ ದೇಶದವರು ಚಿಂತನೆ ನಡೆಸುತ್ತಿದ್ದಾರೆ.

ಶ್ರೀಲಂಕಾದ ವಶದಲ್ಲಿರುವ 15 ಭಾರತೀಯ ಮೀನುಗಾರರು ಮತ್ತು 52 ದೋಣಿಗಳನ್ನು ಬಿಡುಗಡೆ ಮಾಡುವ ಕುರಿತು ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಮಾಡಿದ ಪ್ರಕಟಣೆ ಕುರಿತು ಆಗಿರುವ ಪ್ರಗತಿ ಬಗ್ಗೆ ಡಾ. ಜೈಶಂಕರ್ ಮಾಹಿತಿ ಸಂಗ್ರಹಿಸಿದರು. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಎಂದು ಶ್ರೀಲಂಕಾ ಕಡೆಯವರು ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದಂತೆ ಭಾರತದಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ನಿರಾಶ್ರಿತರ ವಾಪಸ್ಸಾತಿ ಬಗ್ಗೆ ಚರ್ಚೆಗಳು ನಡೆದವು.

ಶ್ರೀಲಂಕಾಕ್ಕೆ ಹಿಂದಿರುಗಿದ ಬಳಿಕ ಸಚಿವ ಗುಣವರ್ಧನ ಅವರು, ತಮ್ಮ ತಾಯ್ನಾಡಿಗೆ ಮರಳಲು ಸಿದ್ಧರಿರುವ ಸುಮಾರು 3,000 ಶ್ರೀಲಂಕಾದ ನಿರಾಶ್ರಿತರಿಗೆ ತಮ್ಮ ಸರ್ಕಾರವು ಆಯಾ ಜಿಲ್ಲಾ ಸಚಿವಾಲಯಗಳ ಮೂಲಕ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡುತ್ತಿದೆ. ಫೆಬ್ರವರಿಯಲ್ಲಿ ಹಿಂದಿರುಗಿದವರ ಮೊದಲ ಬ್ಯಾಚ್ ಅನ್ನು ನಿರೀಕ್ಷೆ ಮಾಡಲಾಗಿದೆ. ಹಿಂದಿರುಗಿದವರ ಗುರುತುಗಳನ್ನು ಪರಿಶೀಲಿಸಿದ ಬಳಿಕ ದ್ವೀಪ-ರಾಷ್ಟ್ರದ ಉತ್ತರ ಮತ್ತು ಪೂರ್ವದಲ್ಲಿರುವ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ತಮ್ಮ ಮೂಲ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ನಿರಾಶ್ರಿತರನ್ನು ವಾಪಸ್ ಕಳುಹಿಸುವ ಬಗ್ಗೆ ಎರಡೂ ದೇಶಗಳು ಹಲವು ವರ್ಷಗಳಿಂದ ಚರ್ಚೆ ನಡೆಸುತ್ತಿದ್ದವು ಎಂಬುದು ಗಮನಿಸಬೇಕಾದ ಸಂಗತಿ. ಇಲ್ಲಿಯವರೆಗೆ ಯುಎನ್‌ಹೆಚ್‌ಆರ್‌ಸಿ ಸ್ವಯಂಪ್ರೇರಿತರಾಗಿ ಶ್ರೀಲಂಕಾಗೆ ಮರಳುವ ನಿರಾಶ್ರಿತರಿಗೆ ಎಲ್ಲಾ ವ್ಯವಸ್ಥೆ ಮಾಡಿತ್ತು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಶ್ರೀಲಂಕಾ ಸರ್ಕಾರ ಅಗತ್ಯ ನೆರವು ಮತ್ತು ಸೌಲಭ್ಯಗಳನ್ನು ನೀಡದ ಕಾರಣ ಬಹುತೇಕರು ವಾಪಸ್ ಆಗಲು ನಿರಾಕರಿಸಿದ್ದರು. ಇಂಥ ಪರಿಸ್ಥಿತಿಯಲ್ಲಿ ಗುಣವರ್ಧನ ಅವರ ಮಾಧ್ಯಮ ಹೇಳಿಕೆಯು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಭಾರತ ಹಾಗೂ ಶ್ರೀಲಂಕಾ ಸ್ನೇಹಪರ ರಾಷ್ಟ್ರಗಳಾಗಿ ಈಗಾಗಲೇ ಭದ್ರತೆ, ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ದೃಢವಾದ ಸಂಬಂಧಗಳನ್ನು ಹೊಂದಿವೆ. ಮೀನುಗಾರಿಕೆ ಕ್ಷೇತ್ರ ಮತ್ತು ಶ್ರೀಲಂಕಾದ ಭಾರತ ಅನುದಾನಿತ ಅಭಿವೃದ್ಧಿ ಯೋಜನೆಗಳ ನಡುವೆ ಕೆಲವು ಹಿತಾಸಕ್ತಿಗಳಿಂದಾಗಿ ಮಾತ್ರ ಎರಡು ದೇಶಗಳ ನಡುವೆ ಸಮಸ್ಯೆಗಳು ಜೀವಂತವಾಗಿವೆ. ಈ ಸಮಸ್ಯೆಗಳನ್ನು ಬಹಳ ಹಿಂದೆಯೇ ಪತ್ತೆಹಚ್ಚಲಾಗಿದ್ದು ಇವು ದ್ವಿಪಕ್ಷೀಯ ಸಂಬಂಧಗಳಲ್ಲಿ ಕಿರಿಕಿರಿ ಉಂಟುಮಾಡುತ್ತಿವೆ. ದಿನೇಶ್ ಗುಣವರ್ಧನ ಅವರ ಭೇಟಿ ಸೇರಿದಂತೆ 2019ರ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಬಳಿಕ ಎರಡು ದೇಶಗಳ ನಡುವೆ ಪ್ರಾರಂಭವಾದ ಉನ್ನತ ಮಟ್ಟದ ವಿನಿಮಯ ಪ್ರಕ್ರಿಯೆಯು ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದೆ ಮತ್ತು ಸುಸ್ಥಿರ ಪರಿಹಾರಗಳಿಗೆ ಸಹಕಾರಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

 ಸ್ಕ್ರಿಪ್ಟ್: ಗುಲ್ಬಿನ್ ಸುಲ್ತಾನಾ, ಸಂಶೋಧನಾ ವಿಶ್ಲೇಷಕ, ಐಡಿಎಸ್ಎ