ಓಮನ್: ಯುಗದ ಅಂತ್ಯ

ಐದು ದಶಕಗಳ ಕಾಲ ಆಳಿದ, ಪ್ರಮುಖ ಕೊಲ್ಲಿ ದೇಶಗಳಲ್ಲಿ ಕಾವಲುಗಾರರ ಬದಲಾವಣೆಗೆ ದಾರಿ ಮಾಡಿಕೊಟ್ಟ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರು ದೀರ್ಘಾವಧಿ ಕಾಯಿಲೆಯ ಬಳಲಿಕೆ ಬಳಿಕ ಜನವರಿ 10ರಂದು ನಿಧನರಾಗುವ ಮೂಲಕ ಒಮನ್ ದೇಶದ ಒಂದು ಯುಗ ಅಂತ್ಯಗೊಂಡಂತಾಗಿದೆ. ಸುಲ್ತಾನ್ ಕಬೂಸ್ ಮೇರು ವ್ಯಕ್ತಿತ್ವದ ಆಡಳಿತಗಾರರಾಗಿದ್ದರು ಹಾಗೂ ಜಾಗತಿಕವಾಗಿ ಗೌರವಿಸಲ್ಪಟ್ಟವರಾಗಿದ್ದರು. 79 ವರ್ಷದ ಸುಲ್ತಾನ್ ಪ್ರಾದೇಶಿಕವಾಗಿ ಭಾರೀ ಪ್ರಭಾವಿಗಳಾಗಿದ್ದ ಸೌದಿ ಅರೇಬಿಯಾ ಮತ್ತು ಇರಾನ್‌ಗಳ ಜೊತೆ ಒಮನ್ ಸಮತೋಲನ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ಒಮಾನ್‌ ದೇಶಕ್ಕೆ ಸ್ಥಿರತೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ತಂದುಕೊಟ್ಟರು. 1970ರಲ್ಲಿ ರಕ್ತರಹಿತ ದಂಗೆಯಲ್ಲಿ ತನ್ನ ಸಂಪ್ರದಾಯವಾದಿ ತಂದೆ ಸೈದ್ ಬಿನ್ ತೈಮೂರ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ಸುಲ್ತಾನ್ ಕಬೂಸ್ ಅವರು ಧೋಫರ್ ದಂಗೆಯನ್ನು ದಮನ ಮಾಡಿದರು. ಗುಲಾಮಗಿರಿಯನ್ನು ರದ್ದುಪಡಿಸಿದರು‌. ಒಮಾನ್ ದೇಶವನ್ನು ಆಧುನೀಕರಣದ ಹಾದಿಗೆ ಕೊಂಡೊಯ್ದರು. 1996ರಲ್ಲಿ ಮೊದಲ ಲಿಖಿತ ಸಂವಿಧಾನವನ್ನು ಮಂಡಿಸಿದರು. ರಾಜಕೀಯ, ವ್ಯಾಪಾರ ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಿದರು. ಆಧುನಿಕ ಒಮಾನ್‌ ಪಿತಾಮಹ ಎಂದು ಕರೆಯಲ್ಪಡುವ ಇವರು 2015ರ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು. ಯೆಮನ್‌ನಲ್ಲಿ ಪಕ್ಷಗಳನ್ನು ಒಟ್ಟುಗೂಡಿಸಲು ಮಧ್ಯವರ್ತಿಯಾಗಿ ಇವರು ನಿರ್ವಹಿಸಿದ ಪಾತ್ರ ಮಹತ್ವದ್ದು. ಇವರು ರೂಪಿಸಿದ ಹೋರಾಟ ಮತ್ತು ಇವರ ಮಧ್ಯಸ್ಥಿಕೆ ವಹಿಸಿದ ಪಾತ್ರ ಬಹಳ ಪ್ರಖ್ಯಾತವಾದುದಾಗಿದೆ.
ಸುಲ್ತಾನ್ ಕಬೂಸ್ ಅವರ ಉತ್ತರಾಧಿಕಾರಿಯ ಅನುಪಸ್ಥಿತಿಯಿಂದಾಗಿ ಒಮಾನ್‌ನಲ್ಲಿ ಕಷ್ಟಕರವಾದ ವಾತಾವರಣ ನಿರ್ಮಾಣವಾಗಿತ್ತು. ಹಲವು ರೀತಿಯ ಉಹಾಪೋಹಗಳು ಸರಿದಾಡುತ್ತಿದ್ದವು. ಸುಲ್ತಾನ್ ಕಬೂಸ್‌ನ ಸೋದರ ಸಂಬಂಧಿ ಹೈಥಮ್ ಬಿನ್ ತಾರಿಕ್ ಅಲ್ ಸೈದ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲು ಅವರ ಕುಟುಂಬ ಮಂಡಳಿ ನಿರ್ಧರಿಸುವದರೊಂದಿಗೆ ಉಹಾಪೋಹಗಳಿಗೆ ಪೂರ್ಣವಿರಾಮ ಹಾಕಲಾಯಿತು. ಹೈಥಮ್ ಬಿನ್ ತಾರಿಕ್ ಅವರು ಸುಲ್ತಾನರ ಸಂಸ್ಕೃತಿ ಮತ್ತು ಪಾರಂಪರಿಕ ಸಚಿವಾಲಯದ ಮುಖ್ಯಸ್ಥರಾಗುವ ಮುನ್ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ಕಬೂಸ್ ಅವರೇ ಪ್ರಧಾನ ಮಂತ್ರಿ, ರಕ್ಷಣಾ, ಹಣಕಾಸು, ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಮತ್ತು ಕೇಂದ್ರ ಬ್ಯಾಂಕಿನ ಗವರ್ನರ್ ಆಗಿ ಏಕಾಂಗಿಯಾಗಿ ಆಳ್ವಿಕೆ ಮಾಡಿದ ದೇಶವನ್ನು ಹೊಸ ಸುಲ್ತಾನ್ ವಂಶಪಾರಂಪರ್ಯವಾಗಿ ಪಡೆದಿದ್ದಾರೆ. ಮಾಜಿ ಆಡಳಿತಗಾರರಂತೆಯೇ ಅದೇ ಗೌರವ ಮತ್ತು ಅನುಸರಣೆಯನ್ನು ಉಳಿಸಿಕೊಳ್ಳುವುದು ಅವರಿಗೆ ಸುಲಭವಾದುದಲ್ಲ. ಆರ್ಥಿಕ ಮುಗ್ಗಟ್ಟು ಮತ್ತು ಹೆಚ್ಚಾಗಿರುವ ನಿರುದ್ಯೋಗವು ದೇಶೀಯ ವ್ಯವಸ್ಥೆಯಲ್ಲಿ ಹೊಸ ಆಡಳಿತಗಾರನಿಗೆ ಸವಾಲಾಗಿ ಪರಿಣಮಿಸಿವೆ. ಪ್ರಾದೇಶಿಕ ಪೈಪೋಟಿಯಲ್ಲಿ ನಿಲುವು ಹೊಂದುವ ವಿಷಯ ಬಂದಾಗ ಬಾಹ್ಯ ಒತ್ತಡಗಳನ್ನು ಮೀರಿ ತಟಸ್ಥ ವಿದೇಶಾಂಗ ನೀತಿ ಕಾಯ್ದುಕೊಳ್ಳುವುದು ಅವರ ಕಾರ್ಯಕ್ಷಮತೆಗೆ ಹಿಡಿಯುವ ಕನ್ನಡಿಯಾಗುತ್ತದೆ. ಅದೇನೇ ಇದ್ದರೂ ಓಮನ್ ಸುಲ್ತಾನ್ ಎಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೈಥಮ್ ಬಿನ್ ತಾರಿಕ್ ದೇಶವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಲ್ಲಿ ಎಲ್ಲಾ ರಾಷ್ಟ್ರಗಳ ಜೊತೆಗಿನ ಸ್ನೇಹ ಸಂಬಂಧ ಇರುವ ತಮ್ಮ ಹಿಂದಿನ ನೀತಿಗಳನ್ನು ಮುಂದುವರಿಸುವ ಭರವಸೆ ವ್ಯಕ್ತಪಡಿಸಿದರು.
ಮಸ್ಕತ್ ಕಬೂಸ್ ಬಿನ್ ಸೈಡ್ ಅವರ ಸಾವಿನ ಹಿನ್ನೆಲೆಯಲ್ಲಿ ಮೂರು ದಿನಗಳ ಅಧಿಕೃತ ಶೋಕಾಚರಣೆ ಮತ್ತು 40 ದಿನಗಳವರೆಗೆ ರಾಷ್ಟ್ರಧ್ವಜವನ್ನು ಅರ್ಧ ಮಾಸ್ಟ್ ಸ್ಥಾನದಲ್ಲಿ ಹಾರಿಸುವಂತೆ ಸೂಚಿಸಲಾಯಿತು. ಯುಎಸ್ಎ, ಯುಕೆ, ಇರಾನ್, ಸೌದಿ ಅರೇಬಿಯಾ, ಕತಾರ್, ಯುಎಇ, ಟರ್ಕಿ, ಜೋರ್ಡಾನ್, ಈಜಿಪ್ಟ್, ಬಹ್ರೇನ್ ಮತ್ತಿತರ ದೇಶಗಳು ಸಂತಾಪ ಸೂಚಿಸಿ ಒಬ್ಬ ಪ್ರಮುಖ ರಾಜಕಾರಣಿಯನ್ನು ಕಳೆದುಕೊಂಡ ಬಗ್ಗೆ ದುಃಖ ವ್ಯಕ್ತಪಡಿಸಿದವು. ಓಮಾನಿ ನಾಯಕನಿಗೆ ಗೌರವ ಸಲ್ಲಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ,
‘ಸುಲ್ತಾನ್ ಕಬೂಸ್ ತಮ್ಮ ಪ್ರದೇಶ ಮತ್ತು ಜಗತ್ತಿಗೆ ಶಾಂತಿಯ ದಾರಿದೀಪವಾಗಿದ್ದರು ಮತ್ತು ಭಾರತದ ನಿಜವಾದ ಸ್ನೇಹಿತರಾಗಿದ್ದರು’ ಎಂದು ಹೇಳಿದರು. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುಲ್ತಾನ್ ಕಬೂಸ್ ಅವರನ್ನು “ಭಾರತದ ಆಪ್ತ ಸ್ನೇಹಿತ, ಜಗತ್ತು ಮತ್ತು ಅವರ ಪ್ರದೇಶದಲ್ಲಿ ಶಾಂತಿ ನೆಲಸುವಂತೆ  ದಣಿವರಿಯದೆ ದುಡಿದ ಮಹಾನ್ ನಾಯಕ, ಮಹಾನ್ ರಾಜಕಾರಣಿ” ಎಂದು ಅಭಿಪ್ರಾಯಪಟ್ಟರು. ಭಾರತೀಯ ಗೃಹ ಸಚಿವಾಲಯವು ಜನವರಿ 13ರಂದು ಸುಲ್ತಾನ್ ಸಾವಿನ ಬಗ್ಗೆ ಶೋಕಾಚರಣೆ ಆಚರಿಸಲಿದೆ ಎಂದು ಘೋಷಿಸಿತು. ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರಿಗೆ ಗೌರವದ ಸಂಕೇತವಾಗಿ ಭಾರತೀಯ ಧ್ವಜವು ದಿನವಿಡೀ ಅರ್ಧದಷ್ಟು ಹಾರಿತು. ಭಾರತದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಜನವರಿ 14, 2020 ರಂದು ಭಾರತೀಯ ಸರ್ಕಾರ ಮತ್ತು ಜನರ ಪರವಾದ ನಿಯೋಗದೊಂದಿಗೆ ಮಸ್ಕತ್‌ಗೆ ತೆರಳಿ ಸಂತಾಪ ಸೂಚಿಸಿದರು.
ಸುಲ್ತಾನ್ ಕಬೂಸ್ ಅವರ ಸಾವಿಗೆ‌ ಮರುಗಿ ಪ್ರಧಾನಿ ಮೋದಿ ಕಳುಹಿಸಿದ ಶೋಕ ಸಂದೇಶದಲ್ಲಿ “ಭಾರತ ಮತ್ತು ಒಮಾನ್ ನಡುವೆ ರೋಮಾಂಚಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬೆಳೆಸಲು ಸುಲ್ತಾನ್ ಬಲವಾದ ನಾಯಕತ್ವವನ್ನು ಕೊಟ್ಟಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ. ಇದಾದ ಬಳಿಕ ಹೊಸ ಸುಲ್ತಾನರನ್ನು ಅಭಿನಂದಿಸಿರುವ ಮೋದಿ, “ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲು ಭಾರತವು ಸುಲ್ತಾನ್ ಹೈಥಮ್ ಅವರೊಂದಿಗೆ ಕೈ ಜೋಡಿಸಲು ಎದುರು ನೋಡುತ್ತಿದೆ” ಎಂದು ಹೇಳಿದ್ದಾರೆ. ಭಾರತ ಮತ್ತು ಒಮಾನ್ ಕಾರ್ಯತಂತ್ರದ ಮತ್ತು ಸೌಹಾರ್ದಯುತ ಸಂಬಂಧವನ್ನು ಹಂಚಿಕೊಳ್ಳುತ್ತವೆ ಮತ್ತು ಎರಡೂ ದೇಶಗಳು ಪ್ರಾಚೀನ ಕಾಲದಿಂದಲೂ ವ್ಯಾಪಾರದಲ್ಲಿ ತೊಡಗಿರುವ ನೈಸರ್ಗಿಕ ಪಾಲುದಾರ ರಾಷ್ಟ್ರಗಳಾಗಿವೆ.  8,00,000ಕ್ಕೂ ಹೆಚ್ಚು ಭಾರತೀಯ ವಲಸಿಗರಿಗೆ ಒಮಾನ್ ಆತಿಥ್ಯ ಒದಗಿಸಿದ್ದು ಅವರೆಲ್ಲರೂ ಭಾರತಕ್ಕೆ ಹಣ ರವಾನಿಸುತ್ತಿದ್ದಾರೆ. ಸುಲ್ತಾನರ ಒಟ್ಟಾರೆ ಅಭಿವೃದ್ಧಿಗೆ ಭಾರತೀಯ ಕಾರ್ಮಿಕರು ಮಹತ್ವದ ಕೊಡುಗೆ ನೀಡಿದ್ದಾರೆ. ಹೊಸ ಸುಲ್ತಾನ್ ಆಳ್ವಿಕೆಯಲ್ಲಿ ಒಮಾನ್ ಜೊತೆ ನಿಕಟ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಮೊದಲಿನಂತೆಯೇ ಅದೇ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.
ಸ್ಕ್ರಿಪ್ಟ್: ಡಾ. ಲಕ್ಷ್ಮಿ ಪ್ರಿಯಾ, ಸಂಶೋಧನಾ ವಿಶ್ಲೇಷಕ, ಐಡಿಎಸ್ಎ