ಇಂಡೋ-ರಷ್ಯಾ ಸಂಬಂಧ ವೃದ್ಧಿ ನಡುವೆ ಲಾವ್ರೋವ್ ಭಾರತ ಭೇಟಿ

“ರೈಸಿನಾ ಸಂವಾದ” ದಲ್ಲಿ ಭಾಗವಹಿಸಲು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ನವದೆಹಲಿ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಅತ್ಯುತ್ತಮ ಸ್ಥಿತಿಯನ್ನು ಪರಿಶೀಲಿಸಲು ಒಂದು ಅವಕಾಶವನ್ನು ಒದಗಿಸಿತು. ಇರಾನ್, ಲಿಬಿಯಾ ಮತ್ತು ಸಿರಿಯಾವನ್ನು ಒಳಗೊಂಡ ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಲಾವ್ರೊವ್ ಅವರು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರೊಂದಿಗೆ ಆಳವಾದ ಚರ್ಚೆ ನಡೆಸಿದರು. ನಂತರ ರಷ್ಯಾದ ವಿದೇಶಾಂಗ ಸಚಿವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದರು. ಲಾವ್ರೊವ್ ಅವರೊಂದಿಗಿನ ಸಭೆಯಲ್ಲಿ, ಕಳೆದ ವರ್ಷ ತೆಗೆದುಕೊಂಡ ಹಲವಾರು ಪ್ರಮುಖ ನಿರ್ಧಾರಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಚರ್ಚಿಸಿದರು ಮತ್ತು ನವದೆಹಲಿ ಮತ್ತು ಮಾಸ್ಕೋ ನಡುವೆ ಕಾರ್ಯತಂತ್ರದ ಸಹಭಾಗಿತ್ವವನ್ನು ಸ್ಥಾಪಿಸಿದ 20 ನೇ ವಾರ್ಷಿಕೋತ್ಸವದ ವರ್ಷವಾದ 2020 ವರ್ಷವನ್ನು ನಿರ್ಧಾರಗಳನ್ನು ಜಾರಿಗೆ ತರುವ ವರ್ಷವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ವಿದೇಶಾಂಗ ಸಚಿವರ ಮಟ್ಟದ ಚರ್ಚೆಯ ಸಮಯದಲ್ಲಿ, ಡಾ. ಜೈಶಂಕರ್ ಮತ್ತು ಲಾವ್ರೊವ್ ಇಬ್ಬರೂ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಚರ್ಚಿಸಿದರು. ವಿಶ್ವ ಆರ್ಥಿಕತೆ ಮತ್ತು ಪರ್ಷಿಯನ್ ಕೊಲ್ಲಿ ಪ್ರದೇಶದ ಭೌಗೋಳಿಕ ರಾಜಕೀಯದ ಮೇಲೆ ಅದರ ಪ್ರಭಾವದ ಬಗ್ಗೆಯೂ ಮಾತನಾಡಿದರು. ವಿದೇಶಾಂಗ ಮಂತ್ರಿಗಳು 2020ರ ಸಮಗ್ರ ದ್ವಿಪಕ್ಷೀಯ ಕಾರ್ಯಸೂಚಿಯನ್ನು ಪ್ರಸ್ತಾಪಿಸಿದರು. ಹೊಸ ವರ್ಷದ ಆರಂಭದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಮೊದಲ ಉನ್ನತ ಮಟ್ಟದ ಸಂವಹನವು ಭವಿಷ್ಯದ ಶೃಂಗಸಭೆಯ ಮಟ್ಟದ ಸಂವಹನಗಳಿಗೆ ನಾಂದಿ ಹಾಡಿದೆ. ಈ ವರ್ಷ ಬಹುಪಕ್ಷೀಯ ಸಭೆಗಳು ನಡೆಯಲಿವೆ.

20ನೇ ಭಾರತ ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 2019 ರ ಸೆಪ್ಟೆಂಬರ್‌ನಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ಕೊನೆಯ ಬಾರಿಗೆ ಭೇಟಿಯಾದರು. ಈ ವರ್ಷದ ಕೊನೆಯಲ್ಲಿ ರಷ್ಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುವ ವೇಳೆ ಉಭಯ ನಾಯಕರು ಮತ್ತೆ ಭೇಟಿಯಾಗುವ ನಿರೀಕ್ಷೆಯಿದೆ. ಏತನ್ಮಧ್ಯೆ, ಜಿ -20 ಶೃಂಗಸಭೆ, ಬ್ರಿಕ್ಸ್ ಶೃಂಗಸಭೆ ಮತ್ತು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸೇರಿದಂತೆ ವಿವಿಧ ಬಹುಪಕ್ಷೀಯ ಸಭೆಗಳ ಸಂದರ್ಭದಲ್ಲಿ ಉಭಯ ನಾಯಕರು ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನ, ವಿಜಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಮೇ ತಿಂಗಳಲ್ಲಿ ಮಾಸ್ಕೋಗೆ ಭೇಟಿ ನೀಡಲಿದ್ದಾರೆ.

ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಸಹಭಾಗಿತ್ವದ ಪ್ರಗತಿಪರ ಅಭಿವೃದ್ಧಿಯ ಬಗ್ಗೆ ವಿದೇಶಾಂಗ ಸಚಿವ ಲಾವ್ರೊವ್ ಚರ್ಚಿಸಿದರು. ಅವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಜೈಶಂಕರ್ ಅವರು ದ್ವಿಪಕ್ಷೀಯ ಸಂಬಂಧಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಸಮಾಲೋಚಿಸಿದರು. ಕಳೆದ ವರ್ಷ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 20 ನೇ ವಾರ್ಷಿಕ ಶೃಂಗಸಭೆಯ ನಂತರ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ, ಭಾರತ ಮತ್ತು ರಷ್ಯಾ ಸಮಕಾಲೀನ ಪ್ರಪಂಚದ ಪ್ರಕ್ಷುಬ್ಧ ವಾಸ್ತವಗಳನ್ನು ಯಶಸ್ವಿಯಾಗಿ ನಿಭಾಯಿಸಿವೆ ಮತ್ತು ಹೊರಗಿನ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದೆ. ಕಾರ್ಯತಂತ್ರದ ಸಹಭಾಗಿತ್ವವು ವಿಶೇಷ ಸ್ವರೂಪವನ್ನು ಪ್ರದರ್ಶಿಸಿದೆ, ಇದು ಸಂಕೀರ್ಣ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಸ್ಥಿರತೆಯ ಆಧಾರವಾಗಿ ಹೊರಹೊಮ್ಮಿದೆ.

ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ವಿಸ್ತರಿಸಲು ಮತ್ತು ಗಾಢವಾಗಿಸಲು, ಭಾರತ ಮತ್ತು ರಷ್ಯಾ 2025 ರ ವೇಳೆಗೆ 30 ಬಿಲಿಯನ್ ಯುಎಸ್ ಡಾಲರ್ಗಳಷ್ಟು ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸುವ ಗುರಿಯನ್ನು ಹೊಂದಿವೆ. ಇದನ್ನು ಸಾಧಿಸಲು, ಭಾರತ ಮತ್ತು ರಷ್ಯಾದ ಪ್ರಭಾವಶಾಲಿ ಸಂಪನ್ಮೂಲ ಸಾಮರ್ಥ್ಯವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಉಭಯ ದೇಶಗಳು ಈಗ ಹೊಸ ತಾಂತ್ರಿಕ ಮತ್ತು ಹೂಡಿಕೆ ಸಹಭಾಗಿತ್ವವನ್ನು ಸೃಷ್ಟಿಸಲು ಕೆಲಸ ಮಾಡುತ್ತಿವೆ, ವಿಶೇಷವಾಗಿ ಸುಧಾರಿತ ಹೈಟೆಕ್ ಪ್ರದೇಶಗಳಲ್ಲಿ ಮತ್ತು ಸಹಕಾರದ ಹೊಸ ಮಾರ್ಗಗಳಲ್ಲಿ ತೊಡಗಿಸಿಕೊಂಡಿವೆ.

ಮಿಲಿಟರಿ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ನಿಕಟ ಸಹಕಾರವು ಕಾರ್ಯತಂತ್ರದ ಸಹಭಾಗಿತ್ವದ ಆಧಾರಸ್ತಂಭವಾಗಿದೆ ಎಂದು ಎರಡೂ ದೇಶ ಗುರುತಿಸಿಕೊಂಡಿದೆ. ಈ ನಡುವೆ ಭಾರತ ಮತ್ತು ರಷ್ಯಾ ಅಮೆರಿಕದ ಕಠಿಣ ಒತ್ತಡವಿದ್ದರೂ ಭಾರತಕ್ಕೆ ‘ಎಸ್ -400 ಕ್ಷಿಪಣಿ ವಿರೋಧಿ ವ್ಯವಸ್ಥೆಗಳನ್ನು’ ಪೂರೈಸಲು ಕಾರ್ಯತಂತ್ರದ ಒಪ್ಪಂದ ಮಾಡಿಕೊಂಡಿವೆ. ಭಾರತೀಯ ಸಶಸ್ತ್ರ ಪಡೆಗಳ ಬಲವನ್ನು ಬಲಪಡಿಸುವಲ್ಲಿ ರಷ್ಯಾ ಭಾರತದ ವಿಶ್ವಾಸಾರ್ಹ ಪಾಲುದಾರನಾಗಿದ್ದು, ವಿಶ್ವಸಂಸ್ಥೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಸಹಾಯ ಮಾಡಿದೆ. 15 ಸದಸ್ಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ರಷ್ಯಾ ಭಾರತವನ್ನು ಬೆಂಬಲಿಸಿದ್ದು, ಪ್ರತಿಷ್ಠಿತ 48 ಸದಸ್ಯರ ಪರಮಾಣು ಸರಬರಾಜುದಾರರ ಗುಂಪಿನಲ್ಲಿ (ಎನ್‌ಎಸ್‌ಜಿ) ಭಾರತದ ಪ್ರವೇಶವನ್ನೂ ಬೆಂಬಲಿಸಿದೆ.

ಈ ಹಿನ್ನೆಲೆಯಲ್ಲಿ, ರಷ್ಯಾದ ವಿದೇಶಾಂಗ ಸಚಿವರ ಭೇಟಿ ಭಾರತವು ಕಾರ್ಯತಂತ್ರದ ನಿರಂತರ ಸಹಕಾರ ಕಾರ್ಯಕ್ರಮಗಳನ್ನು ಪರಿಶೀಲಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸಿತು. ಇಂಡೋ-ರಷ್ಯಾದ ಸಂಬಂಧಗಳು ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ-ರಾಜಕೀಯ ಸಮೀಕರಣಗಳ ಹಿನ್ನೆಲೆಯಲ್ಲಿ ಭರವಸೆಯ ಭವಿಷ್ಯಕ್ಕೆ ಸ್ಪೂರ್ತಿಯಾಗಿದೆ.

ಲೇಖನ : ರಂಜಿತ್ ಕುಮಾರ್, ಹಿರಿಯ ಪತ್ರಕರ್ತರು