5 ಟ್ರಿಲಿಯನ್ ಆರ್ಥಿಕತೆಗಾಗಿ ‘ಎನ್ಐಪಿ’ ಜಾರಿಗೊಳಿಸಿದ ಕೇಂದ್ರ

ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ (ಎನ್ಐಪಿ) ಯೋಜನೆಗೆ 102 ಲಕ್ಷ ಕೋಟಿ ರೂ. ನೀಡುವ ಮೂಲಕ ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರಲು ಬದ್ಧವಾಗಿದೆ ಎಂಬ ಸುಳಿವು ನೀಡಿದೆ. ಸ್ವಾತಂತ್ರ್ಯ ನಂತರ ಹಲವಾರು ಸರ್ಕಾರಿ ಪ್ರಾಯೋಜಿತ ಯೋಜನೆಗಳು ಜಾರಿಯಾಗಿವೆ, ಅವು ಬೆಳವಣಿಗೆಯನ್ನು ಉತ್ತೇಜಿಸಿವೆ ಮತ್ತು ಲಕ್ಷಾಂತರ ಜನರನ್ನು ಬಡತನದಿಂದ ಹೊರಹಾಕಿವೆ; ಇದೇ ರೀತಿ ಎನ್ಐಪಿ ಎಲ್ಲರಿಗೂ ಸಮಾನವಾದ ಮೂಲಸೌಕರ್ಯಗಳನ್ನು ಕಲ್ಪಿಸುತ್ತದೆ, ಅಲ್ಲದೆ 2024-25ರ ವೇಳೆಗೆ ದೇಶವನ್ನು 5 ಟ್ರಿಲಿಯನ್ ಆರ್ಥಿಕತೆಗೆ ಕೊಂಡೊಯ್ಯುವ ಭರವಸೆಯನ್ನೂ ನೀಡುತ್ತದೆ. ಮಹತ್ವಾಕಾಂಕ್ಷೆ ಯೋಜನೆಯಾದ ಎನ್ಐಪಿ ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಯನ್ನು ಅಂತರ್ಗತಗೊಳಿಸಿಕೊಂಡಿದೆ. ಪರಿಣಾಮಕಾರಿಯಾಗಿ ಜಾರಿಗೊಳ್ಳುವುದರಿಂದ ಜನರ ಜೀವನಕ್ರಮವೂ ಸುಧಾರಣೆ ಆಗಲಿದೆ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದಿದ್ದರು. ಈ ದೈತ್ಯಾಕಾರದ ಕಾರ್ಯವನ್ನು ಸಾಧಿಸಲು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2019ರ ಸೆಪ್ಟೆಂಬರ್ ನಲ್ಲಿ ಕಾರ್ಯಪಡೆಯನ್ನು ರಚಿಸಲಾಗಿತ್ತು. ಕಾರ್ಯಪಡೆಯು ನಾಲ್ಕು ತಿಂಗಳ ಅವಧಿಯಲ್ಲಿ 70 ಮಧ್ಯಸ್ಥಗಾರರ ಜೊತೆ ಸಮಾಲೋಚನೆ ನಡೆಸಿ 102 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಹೆಸರಿಸಿದೆ.

ರಸ್ತೆಮಾರ್ಗಗಳಿಂದ ರೈಲ್ವೆವರೆಗೆ, ಇಂಧನದಿಂದ ನಗರ ನೀರಾವರಿ, ಚಲನಶೀಲತೆ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಎನ್ಐಪಿ ಅಡಿಯಲ್ಲಿ ಬಂದರು ಮತ್ತು ವಿಮಾನ ನಿಲ್ದಾಣ ಯೋಜನೆಗಳಿಗೆ 2.5 ಲಕ್ಷ ಕೋಟಿ ರೂ., ಡಿಜಿಟಲ್ ಇನ್ಫ್ರಾ ಯೋಜನೆಗಳಿಗೆ 3.2 ಲಕ್ಷ ಕೋಟಿ ರೂ., ನೀರಾವರಿ, ಗ್ರಾಮೀಣ, ಕೃಷಿ ಮತ್ತು ಆಹಾರ ಸಂಸ್ಕರಣಾ ಯೋಜನೆಗಳಿಗೆ 16 ಲಕ್ಷ ಕೋಟಿ ರೂ., ರಸ್ತೆ ಯೋಜನೆಗಳಿಗೆ 20 ಲಕ್ಷ ಕೋಟಿ ರೂ. ಹಾಗೂ ರೈಲ್ವೆ ಯೋಜನೆಗಳಿಗೆ 14 ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ.

ಅಲ್ಲದೆ ಎನ್ಐಪಿ ಅಡಿಯಲ್ಲಿ 25 ಲಕ್ಷ ಕೋಟಿ ರೂ. ಮೌಲ್ಯದ ಇಂಧನ ಯೋಜನೆಗಳನ್ನು ಗುರುತಿಸಲಾಗಿದೆ. ಈ ನಡುವೆ ಇನ್ನೊಂದು ಗಮನಾರ್ಹವಾದ ಸಂಗತಿಯೆಂದರೆ ಒಟ್ಟು ನಿರೀಕ್ಷಿತ ಬಂಡವಾಳ 102 ಲಕ್ಷ ಕೋಟಿ ರೂ. ಪೈಕಿ 42.7 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ ಮತ್ತು 32.7 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳು ಪರಿಕಲ್ಪನಾ ಹಂತದಲ್ಲಿವೆ, ಉಳಿದವು ಅಭಿವೃದ್ಧಿಯ ಹಂತದಲ್ಲಿವೆ.

ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿಕೊಂಡಿರುವ ಈ ಯೋಜನೆಗಳನ್ನು ಸಮಯೋಚಿತವಾಗಿ ಅನುಷ್ಠಾನಗೊಳಿಸುವುದು ಸವಾಲಿನ ಸಂಗತಿ. ಆದರೂ ರಾಷ್ಟ್ರ ಮತ್ತು ಜನರಿಗೆ ಸೇವೆ ಸಲ್ಲಿಸಲು ಬದ್ಧತೆ ಇರುವುದರಿಂದ ಸರ್ಕಾರ ಹೆಚ್ಚು ಶಕ್ತಿಯುತವಾಗಿದೆ. ಮಿಷನ್ ಮೋಡ್ ಅಡಿಯಲ್ಲಿ ಗುರಿಗಳನ್ನು ಪೂರ್ಣಗೊಳಿಸಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ದೃಢವಾದ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸಹ ಸ್ಥಾಪಿಸಲಾಗುವುದು.

ಚೆಕ್ಸ್ ಮತ್ತು ಬ್ಯಾಲೆನ್ಸ್ ಹೊಂದಿವೆ ಎಂದು‌ ಕಂಡುಬರುವ
ಎನ್ಐಪಿ ಯೋಜನೆಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನದಲ್ಲಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ವಿವಿಧ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯಗಳು (ವಿದೇಶಿ ಹೂಡಿಕೆದಾರರನ್ನು ಒಳಗೊಂಡಂತೆ) ಸಹ ಎನ್ಐಪಿ ಯೋಜನೆಗಳಲ್ಲಿ ಪ್ರಮುಖ ಪಾಲುದಾರರಾಗುತ್ತವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎನ್ಐಪಿಯಲ್ಲಿ ತಲಾ 39 ಪ್ರತಿಶತದಷ್ಟು ಪಾಲನ್ನು ಹೊಂದಿದ್ದರೆ ಖಾಸಗಿ ವಲಯವು ಶೇಕಡಾ 22ರಷ್ಟು ಪಾಲನ್ನು ಹೊಂದಿರುತ್ತದೆ. ಇದು 2025ರ ವೇಳೆಗೆ ಶೇಕಡಾ 30ಕ್ಕೆ ಏರಿಕೆಯಾಗಬಹುದೆಂದು ಸರ್ಕಾರ ನಿರೀಕ್ಷೆ ಮಾಡಿದೆ.

ಎನ್ಐಪಿ ದೇಶಾದ್ಯಂತ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯಗಳನ್ನು ಹೊಂದುವ ಗುರಿ ಹೊಂದಿದೆ. ಜಾರಿಗೆಯಾದ ಬಳಿಕ ದೇಶದ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಸರ್ಕಾರದ ಆದಾಯದ ಮೂಲವನ್ನು ಸುಧಾರಿಸುವ ಮೂಲಕ ಹೆಚ್ಚುವರಿ ಹಣಕಾಸಿನ ಸ್ಥಳವನ್ನು ಸೃಷ್ಟಿಸುತ್ತದೆ ಮತ್ತು ಉತ್ಪಾದಕ ಪ್ರದೇಶಗಳಲ್ಲಿ ಕೇಂದ್ರೀಕರಿಸಿದ ಖರ್ಚಿನ ಗುಣಮಟ್ಟವನ್ನೂ ಖಚಿತಪಡಿಸುತ್ತದೆ. ವಾದ ಮಾಡುವ ದೃಷ್ಟಿಯಿಂದ ಎನ್ಐಪಿ ಯೋಜನೆಯು ನಿಧಾನಗತಿಯ ಪ್ರಗತಿಗೆ ಸೂಕ್ತ ಉತ್ತರವಾಗಬಲ್ಲದು ಮತ್ತು ಋಣಾತ್ಮಕ ಪ್ರಭಾವಕ್ಕೆ ಒಳಪಡವಂಥದ್ದಲ್ಲ ಎಂಬುದು‌ ಕೂಡ ಮುಖ್ಯವಾದ ಸಂಗತಿಗಳು.

2030ರ ವೇಳೆಗೆ ಭಾರತವು ಶೇಕಡಾ 8ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಆರ್ಥಿಕ ಬೆಳವಣಿಗೆ ಸಾಧಿಸಲು ಮತ್ತು ನಿರುದ್ಯೋಗದ ವಾತಾವರಣ ತೊಡೆದುಹಾಕಲು ಹಾಗೂ ಈ ಮುಖಾಂತರ ನಾಗರಿಕರ ಜೀವನವನ್ನು ಸಂತೋಷ ಮತ್ತು ಸಮೃದ್ಧಿಗೊಳಿಸಲು ಮೂಲಸೌಕರ್ಯಕ್ಕಾಗಿ ಶೇಕಡಾ 4.5ರಷ್ಟು ಅಥವಾ ಅದಕ್ಕೂ ಹೆಚ್ಚಿನ ಆರ್ಥಿಕ ಹೂಡಿಕೆ ಮಾಡಬೇಕಾಗುತ್ತದೆ. ಇದನ್ನು ಸಮರ್ಥವಾಗಿ ಮಾಡುವ ಸಾಮರ್ಥ್ಯವನ್ನು ಎನ್ ಐಪಿ‌ ಹೊಂದಿದೆ. ವಾಸ್ತವವಾಗಿ ದೀರ್ಘಾವಧಿಯ ದೃಷ್ಟಿಯಿಂದ ವಿಶಾಲಧಾರಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ಸಾಧಿಸಲು ಗುಣಮಟ್ಟದ ಮೂಲಸೌಕರ್ಯಗಳ ಲಭ್ಯತೆಯು ಅತ್ಯಂತ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಎನ್ಐಪಿ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದರಿಂದ ರಾಷ್ಟ್ರದ ಸಾಮಾಜಿಕ-ಆರ್ಥಿಕ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನಿರ್ಬಂಧಗಳು ಮತ್ತು ಸವಾಲುಗಳ ಹೊರತಾಗಿಯೂ ಪ್ರಗತಿಯತ್ತ ಸಾಗಲು ಕೇಂದ್ರವು ಉಪಕ್ರಮಗಳೊಂದಿಗೆ ನಿರ್ಧರಿಸಿದ್ದರೆ ಈ ಕ್ರಮವನ್ನು ಎಲ್ಲಾ ವರ್ಗದ ಜನರು ಮುಕ್ತವಾಗಿ ಸ್ವಾಗತಿಸಬೇಕಾಗಿದೆ.

ಸ್ಕ್ರಿಪ್ಟ್: ಶಂಕರ್ ಕುಮಾರ್, ಪತ್ರಕರ್ತ