ಉತ್ಪಾದನಾ ವಲಯದ ಬೆಳವಣಿಗೆಯ ದರ

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮದಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ವೇಗವು ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲಿ ಈ ವರ್ಷದ ಜನವರಿಯಲ್ಲಿ ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ದೇಶದ ಪ್ರಮುಖ ಉತ್ಪಾದನಾ ವಲಯ ಪ್ರಗತಿ ಕಂಡಿರುವುದು ನಿಸ್ಸಂದೇಹವಾಗಿ ಭಾರತದ ಆರ್ಥಿಕ ಭೂದೃಶ್ಯದಲ್ಲಿ ಆರೋಗ್ಯಕರ ಮತ್ತು ಸಕಾರಾತ್ಮಕ ಬೆಳವಣಿಗೆಯಾಗಿದೆ. ಪ್ರಮುಖ ಮಾರುಕಟ್ಟೆ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆಯಾದ ಐ‌ ಎಚ್ ಎಸ್ ಮಾರ್ಕಿಟ್ ನಡೆಸಿದ ಸಮೀಕ್ಷೆಯ ಪ್ರಕಾರ ಕಳೆದ ಡಿಸೆಂಬರ್ ನಲ್ಲಿ 5.27ಇದ್ದ ಭಾರತ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಈ ವರ್ಷದ ಜನವರಿಯಲ್ಲಿ 55.3ಕ್ಕೆ ಏರಿಕೆ ಕಂಡಿದೆ. ಇದು ಕಳೆದ ಎಂಟು ವರ್ಷಗಳಲ್ಲಿ ದಾಖಲಾದ ಅತಿ‌ ದೊಡ್ಡ ಬೆಳವಣಿಗೆಯಾಗಿದ್ದು, ಭಾರತೀಯ ಆರ್ಥಿಕತೆಯಲ್ಲಿ ಮತ್ತೆ ಪ್ರಕಾಶಮಾನವಾದ ಪ್ರತಿಬಿಂಬವನ್ನು ಹೊಮ್ಮಿಸಿದೆ.
ಐಎಚ್ಎಸ್ ಮಾರ್ಕಿಟ್ ವಿಶ್ವಾದ್ಯಂತ 40ಕ್ಕೂ ಹೆಚ್ಚು ಆರ್ಥಿಕತೆಗಳಿಗಾಗಿ ಖರೀದಿ ವ್ಯವಸ್ಥಾಪಕರ ಸೂಚ್ಯಂಕ ದತ್ತಾಂಶವನ್ನು ಸಂಗ್ರಹಿಸಿದೆ. ಖಾಸಗಿ ವಲಯದ ಕಂಪನಿಗಳ ಹಿರಿಯ ಅಧಿಕಾರಿಗಳು ನಡೆಸಿದ ಸಮೀಕ್ಷೆಗಳಿಂದ ಮಾಸಿಕ ದತ್ತಾಂಶವನ್ನು ಪಡೆಯಲಾಗಿದೆ. ಪಿಎಂಐ ಡೇಟಾಸೆಟ್ ಹೆಡ್‌ಲೈನ್ ಸಂಖ್ಯೆಯನ್ನು ಹೊಂದಿದ್ದು ಇದು ಆರ್ಥಿಕತೆಯ ಒಟ್ಟಾರೆ ಆರೋಗ್ಯವನ್ನು ತಿಳಿಸಲಿದೆ. ಅಲ್ಲದೆ 50ಕ್ಕಿಂತ ಹೆಚ್ಚಿನ ಪಿಎಂಐ ವಿಸ್ತರಣೆಯನ್ನು ಸೂಚಿಸುತ್ತದೆ. ಗ್ರಾಹಕ ಸರಕುಗಳ ಉಪ-ವಲಯವು ಮತ್ತೆ ಪ್ರಕಾಶಮಾನವಾಗಿ ಹೊಳೆಯುತ್ತಿದ್ದು ಮಧ್ಯಂತರ ಸರಕುಗಳ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲಾಗಿದೆ. ಬಂಡವಾಳ ಸರಕುಗಳು ಮತ್ತೆ ವಿಸ್ತರಣಾ ಕ್ರಮಕ್ಕೆ ಬಂದಿರುವುದರಿಂದ ಆರ್ಥಿಕತೆಯಲ್ಲಿ ಹೂಡಿಕೆಗಳ ಸಂಭವ ಕೂಡ ನವೀಕರಣಗೊಂಡಿದೆ.
ಪಿಎಂಐ ಸೂಚಕಗಳು ಬಾಹ್ಯ ಮಾರುಕಟ್ಟೆಗಳಲ್ಲಿ ಹೊಸ ವ್ಯವಹಾರ ಹೆಚ್ಚಾಗಲು ನೆರವಾಗಿವೆ. ನವೆಂಬರ್ 2018ರಿಂದ ರಫ್ತು ಪ್ರಮಾಣ ವೇಗವಾಗಿ ಏರಿದೆ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಹೆಚ್ಚಿನ ಮಾರಾಟವಾಗಿದೆ. ಇದಲ್ಲದೆ ಖರ್ಚುಗಳು ಕಡಿಮೆಯಾಗುತ್ತಿದ್ದು ಆದಾಯ ಪ್ರಮಾಣದ ಸುಧಾರಣೆಗೆ ಸಹಾಯವಾಗಿದೆ. ಖರ್ಚುಗಳು ಮತ್ತು ಹೊರಹೋಗುವ ಶುಲ್ಕಗಳು ಕಡಿಮೆಯಾದುದರಿಂದ ವ್ಯವಹಾರದ ಪ್ರಗತಿಗೆ ಬೆಂಬಲ ಬಂದಿದೆ ಎಂದು ಪಿಎಂಐ ದತ್ತಾಂಶ ಹೇಳಿದೆ. ಕೆಲವು ಕಂಪನಿಗಳು ಲೋಹಗಳು, ಜವಳಿ ಮತ್ತು ಆಹಾರಕ್ಕೆ ಹೆಚ್ಚಿನ ಬೆಲೆಗಳೆಂದು ವರದಿ ಮಾಡಿದರೆ, ಇನ್ನು ಕೆಲವು ಕಂಪನಿಗಳು ತಾಮ್ರ, ಪ್ಯಾಕೇಜಿಂಗ್ ವಸ್ತುಗಳು ಮತ್ತು ರಬ್ಬರ್‌ಗೆ ಕಡಿಮೆ ಶುಲ್ಕ ಇರುವ ಬಗ್ಗೆ ಉಲ್ಲೇಖಿಸಿವೆ.
ಬೇಡಿಕೆಯ ಹೆಚ್ಚಳವನ್ನು ಅನುಸರಿಸಿ ಭಾರತೀಯ ಸರಕು ಉತ್ಪಾದಕರು ಜನವರಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಿದರು. ಏಳೂವರೆ ವರ್ಷಗಳಲ್ಲಿ ಈ ಏರಿಕೆ ಪ್ರಬಲವಾಗಿದೆ ಎಂದು ಪಿಎಂಐ ದತ್ತಾಂಶವು ಹೇಳಿದೆ. ವಿಸ್ತರಣೆಯ ಪ್ರಮಾಣವು ಅದರ ದೀರ್ಘಕಾಲೀನ ಸರಾಸರಿಗಿಂತ ಹೆಚ್ಚಿನದಾಗಿದೆ. ಸಂಸ್ಥೆಗಳು ಕಟ್ಟುಪಾಡುಗಳನ್ನು ಸರಿದೂಗಿಸಲು ದಾಸ್ತಾನುಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿವೆ. ಇದರ ಪರಿಣಾಮವಾಗಿ ಸಿದ್ಧಪಡಿಸಿದ ಸರಕುಗಳ ದಾಸ್ತಾನು ಕಡಿಮೆಯಾಗುತ್ತಿವೆ.
ಭಾರತದ ಉತ್ಪಾದನಾ ವಲಯದ ಇತ್ತೀಚಿನ ಸಮೀಕ್ಷೆಯ ಫಲಿತಾಂಶಗಳ ಕುರಿತು ಐಎಚ್‌ಎಸ್ ಮಾರ್ಕಿಟ್‌ ಪ್ರಧಾನ ಅರ್ಥಶಾಸ್ತ್ರಜ್ಞ ಪೊಲ್ಯಣ್ಣಾ ಡಿ ಲಿಮಾ, “ಗಮನಾರ್ಹವಾಗಿ ಮರುಕಳಿಸಿರುವ ಬೇಡಿಕೆಯಿಂದಾಗಿ ಮಾರಾಟ, ಇನ್‌ಪುಟ್ ಖರೀದಿ, ಉತ್ಪಾದನೆ ಮತ್ತು ಉದ್ಯೋಗದಲ್ಲಿ ಪ್ರಗತಿಯಾಗಿದ್ದು ಉದ್ಯಮದ ಪುನರ್ನಿರ್ಮಾಣ ಮತ್ತು ವಿಸ್ತರಣಾ ಸಾಮರ್ಥ್ಯ ಹೆಚ್ಚಾಗಿದೆ. ಹೊಸ ವ್ಯವಹಾರದಲ್ಲಿ ಮತ್ತಷ್ಟು ಪ್ರಗತಿಯನ್ನು ನಿರೀಕ್ಷಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ನೇಮಕಾತಿ ಕೂಡ ವೇಗವನ್ನು ಪಡೆದುಕೊಳ್ಳುತ್ತಿದ್ದು, ಇದು ಆರ್ಥಿಕ ವಿಸ್ತರಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಂಸ್ಥೆಗಳು ಸುಮಾರು ಏಳೂವರೆ ವರ್ಷಗಳಲ್ಲಿ ಉದ್ಯೋಗವನ್ನು ತ್ವರಿತಗತಿಯಲ್ಲಿ ಹೆಚ್ಚಿಸಿವೆ, ಹೊಸ ವ್ಯವಹಾರ ಬೆಳವಣಿಗೆ ಮತ್ತು ಪೈಪ್‌ಲೈನ್‌ನಲ್ಲಿನ ಯೋಜನೆಗಳು ಇದಕ್ಕೆ ಮುಖ್ಯ ಕಾರಣಗಳು. ಪಿಎಂಐ ಫಲಿತಾಂಶಗಳು ಹೇಳಿರುವಂತೆ ಭಾರತದ ಉತ್ಪಾದನಾ ವಲಯಕ್ಕೆ ಮತ್ತೆ ಬೇಡಿಕೆ ಬಂದಿರುವುದು ಮಾರಾಟ, ಇನ್ಪುಟ್ ಖರೀದಿ, ಉತ್ಪಾದನೆ ಮತ್ತು ಉದ್ಯೋಗದ ಬೆಳವಣಿಗೆಯನ್ನು ಹೆಚ್ಚಿಸಿದೆ. ಏಕೆಂದರೆ ಇದರಿಂದ ಸಂಸ್ಥೆಗಳಿಗೆ ತಮ್ಮ ದಾಸ್ತಾನುಗಳನ್ನು ಪುನರ್ನಿರ್ಮಿಸಿಕೊಳ್ಳುವ ಹಾಗೂ ಹೊಸ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಬೆಳೆದಿದೆ.
ಇತ್ತೀಚೆಗೆ ಮಂಡಿಸಲಾದ 2020-21ರ ಸಾಮಾನ್ಯ ಬಜೆಟ್ ವ್ಯಾಪಕ ಶ್ರೇಣಿಯ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಗಮನಹರಿಸುವುದರಿಂದ ಪ್ರಮುಖ ಉತ್ಪಾದನಾ ವಲಯವು ಮತ್ತಷ್ಟು ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಒಟ್ಟಾರೆ ಆರ್ಥಿಕತೆಯಲ್ಲಿ ಬೇಡಿಕೆಯ ಚಕ್ರವನ್ನು ವೇಗಗೊಳಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತದೆ.
ಐಎಚ್ಎಸ್ ಮಾರ್ಕಿಟ್ ಇಂಡಿಯಾ ಮ್ಯಾನ್ಯೂಫ್ಯಾಕ್ಚರಿಂಗ್ ಪಿಎಂಐನ ಇತ್ತೀಚೆಗೆ ಹೊರಡಿಸಿರುವ ಪ್ರಭಾವಶಾಲಿಯಾದ ಇನ್ನೊಂದು ಪ್ರಮುಖ ಸಂಕೇತದ ಪ್ರಕಾರ ಸದ್ಯದ ಜಾಗತಿಕ ಆರ್ಥಿಕ ಹಿಂಜರಿತವನ್ನು ಎದುರಿಸಲು ಭಾರತೀಯ ಆರ್ಥಿಕತೆಯು ಅಂತರ್ಗತ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ.
ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಈಗಾಗಲೇ ಭಾರತೀಯರ ಆರ್ಥಿಕ ಶಕ್ತಿಗೆ ಸಾಕ್ಷ್ಯವನ್ನು ನೀಡಿದ್ದಾರೆ.‌ ಭಾರತೀಯ ಆರ್ಥಿಕತೆಯು ಆರ್ಥಿಕ ಹಿಂಜರಿತದಲ್ಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಕಳೆದ ವರ್ಷ ಭಾರತದ ಆರ್ಥಿಕತೆಯು ಹಠಾತ್ ಕುಸಿತ ಅನುಭವಿಸಿರುವ ಹಾಗೂ ಐಎಂಎಫ್ ಬೆಳವಣಿಗೆ ಕೆಳಮುಖವಾಗಿರುವ ಬಗ್ಗೆ ಪರಿಷ್ಕರಿಸಬೇಕಾಗಿದೆ‌ ಎಂದಿದ್ದರು. ಈಗ ಸದ್ಯದ ಜಾಗತಿಕವಾಗಿ ಮಂದಗತಿಯ ಬಳವಣಿಗೆ ಇರುವುದರ ನಡುವೆಯೂ ಐಎಂಎಫ್ 2020ರಲ್ಲಿ ಶೇ 5.8ರಷ್ಟು ಮತ್ತು 2021ರಲ್ಲಿ ಶೇ 6.5ರಷ್ಟು ಬೆಳವಣಿಗೆ ದರವನ್ನು ನಿರೀಕ್ಷಿಸುತ್ತಿದೆ ಎಂದಿದ್ದಾರೆ.
ಐಎಂಎಫ್ ಮುಖ್ಯಸ್ಥರು ಹೇಳುವಂತೆ ಭಾರತವು ಹಲವಾರು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ, ಅದು ದೀರ್ಘಾವಧಿಯಲ್ಲಿ ದೇಶಕ್ಕೆ ಪ್ರಯೋಜನಕಾರಿಯಾಗಿದೆ. ಭಾರತೀಯ ಆರ್ಥಿಕತೆಯ ಅಂತರ್ಗತ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯು ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ಪೂರಕವಾಗಬಲ್ಲದು ಎಂಬುದು ಈಗ ಜಗತ್ತಿಗೆ ತುಂಬಾ ಚೆನ್ನಾಗಿ ಮನವರಿಕೆಯಾಗಿದೆ.
ಸ್ಕ್ರಿಪ್ಟ್: ಆದಿತ್ಯರಾಜ ದಾಸ್, ಹಿರಿಯ ವಿತ್ತ ಪತ್ರಕರ್ತರು