ದ್ವಿಪಕ್ಷೀಯ ಒಪ್ಪಂದ‌ ವೃದ್ಧಿಗೆ ಶ್ರೀಲಂಕಾ ಪ್ರಧಾನಿ ಭೇಟಿ

ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಉನ್ನತ ಮಟ್ಟದ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿ ಭಾರತೀಯ ನಾಯಕತ್ವದೊಂದಿಗೆ ಮಹತ್ವದ ಚರ್ಚೆ ನಡೆಸಿದರು. ರಾಜಪಕ್ಸೆ ಅವರು ಅಧ್ಯಕ್ಷ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಜೊತೆ ವ್ಯಾಪಕ ಚರ್ಚೆ ನಡೆಸಿದರು. ಇದಾದ ಮೇಲೆ ಭಾರತೀಯ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿ ಅವರೊಂದಿಗೂ ಮಾತುಕತೆ ನಡೆಸಿದರು.
ನೆರೆಯ ದೇಶಗಳಾಗಿರುವ ಭಾರತ ಮತ್ತು ಶ್ರೀಲಂಕಾ ಬಹಳ ಕಾಲದಿಂದಲೂ ಆಪ್ತವಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದ ಇತಿಹಾಸವನ್ನು ಸಂಸ್ಕೃತಿ, ಧರ್ಮ, ಆಧ್ಯಾತ್ಮ ಕಲೆ ಮತ್ತು ಭಾಷೆಯಂತಹ ಅಸಂಖ್ಯಾತ ವರ್ಣರಂಜಿತ ಎಳೆಗಳಿಂದ ನೇಯಲಾಗಿದೆ. ಅದು ಭದ್ರತೆ ಇರಬಹುದು ಅಥವಾ ಆರ್ಥಿಕ ಅಥವಾ ಸಾಮಾಜಿಕ ಪ್ರಗತಿಯಾಗಿರಬಹುದು ಎಲ್ಲದರಲ್ಲೂ ನಮ್ಮ ಹಿಂದಿನ ಮತ್ತು ಭವಿಷ್ಯದ‌ ದೃಷ್ಟಿಯಿಂದ ಎರಡೂ ದೇಶಗಳ ಪರಸ್ಪರ ಸಂಪರ್ಕವಿದೆ. ಶ್ರೀಲಂಕಾದ ಸ್ಥಿರತೆ, ಸುರಕ್ಷತೆ ಮತ್ತು ಸಮೃದ್ಧಿಯು ಭಾರತದ ಹಿತಾಸಕ್ತಿ ಮಾತ್ರವಲ್ಲ, ಅದು ಇಡೀ ಹಿಂದೂ ಮಹಾಸಾಗರ ಪ್ರದೇಶದ ಹಿತದೃಷ್ಟಿಯಿಂದ ಕೂಡಿದೆ. ಆದ್ದರಿಂದ ಇಂಡೋ-ಪೆಸಿಫಿಕ್ ಪ್ರದೇಶದ ಶಾಂತಿ ಮತ್ತು ಸಮೃದ್ಧಿಗೆ ನಾವು ನೀಡುವ ನಿಕಟ ಸಹಕಾರವು ಮೌಲ್ಯಯುತವಾಗಿದೆ. ನಮ್ಮ ಸರ್ಕಾರ “ನೆರೆಹೊರೆಯವರಿಗೆ ಮೊದಲ ಆದ್ಯತೆ” ಎಂಬ ನೀತಿ ಮತ್ತು “ಸಾಗರ್” (ಎಲ್ಲರ ಭದ್ರತೆ ಮತ್ತು ಬೆಳವಣಿಗೆ) ಎಂಬ ಸಿದ್ಧಾಂತಕ್ಕೆ ಅನುಗುಣವಾಗಿದೆ. ಶ್ರೀಲಂಕಾ‌ ಜೊತೆಗಿನ ಸಂಬಂಧಗಳಿಗೆ ಭಾರತ ವಿಶೇಷ ಆದ್ಯತೆ ನೀಡಿದೆ. ಪ್ರಾದೇಶಿಕ ಭದ್ರತೆ ಮತ್ತು ಅಭಿವೃದ್ಧಿಗಾಗಿ ಭಾರತದೊಂದಿಗೆ ಕೆಲಸ ಮಾಡುವ ಶ್ರೀಲಂಕಾ ಸರ್ಕಾರದ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.
ಪ್ರಧಾನಿ ಮೋದಿ ಮತ್ತು ರಾಜಪಕ್ಸೆ ಅವರು ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಅಂಶಗಳು ಮತ್ತು ಪರಸ್ಪರ ಹಿತಾಸಕ್ತಿಯ ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಯೋತ್ಪಾದನೆ ಒಂದು ದೊಡ್ಡ ಅಪಾಯವಾಗಿದೆ. ಎರಡೂ ದೇಶಗಳು ಇದರ‌ ವಿರುದ್ಧ ದೃಢವಾಗಿ ಹೋರಾಡಿವೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಶ್ರೀಲಂಕಾದಲ್ಲಿ “ಈಸ್ಟರ್ ದಿನದಂದು” ನೋವಿನ ಮತ್ತು ಅನಾಗರಿಕ ಭಯೋತ್ಪಾದಕ ದಾಳಿಗಳು ನಡೆದಿವೆ. ಈ ದಾಳಿಗಳು ಶ್ರೀಲಂಕಾಕ್ಕೆ ಮಾತ್ರವಲ್ಲ, ಮಾನವೀಯತೆಗೂ ಹೊಡೆತ ನೀಡಿವೆ. ಹಾಗಾಗಿ ಭಯೋತ್ಪಾದನೆ ವಿರುದ್ಧ ದ್ವಿಪಕ್ಷೀಯ ಸಹಕಾರ ಹೆಚ್ಚಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು. ಶ್ರೀಲಂಕಾದ ಪೊಲೀಸ್ ಅಧಿಕಾರಿಗಳು ಭಾರತದ ಪ್ರಧಾನ ತರಬೇತಿ ಸಂಸ್ಥೆಗಳಲ್ಲಿ ಭಯೋತ್ಪಾದನಾ ವಿರೋಧಿ ಕೋರ್ಸ್ ಕಲಿಯಲು ಪ್ರಾರಂಭಿಸಿದ್ದಾರೆ. ಉಭಯ ದೇಶಗಳ ಏಜೆನ್ಸಿಗಳ ನಡುವಿನ ಸಂಪರ್ಕ ಮತ್ತು ಸಹಕಾರವನ್ನು ಇನ್ನಷ್ಟು ಬಲಪಡಿಸಲು ಭಾರತವು ಬದ್ಧವಾಗಿದೆ.
ಇಬ್ಬರೂ ನಾಯಕರು ಶ್ರೀಲಂಕಾದಲ್ಲಿ ಜಂಟಿ ಆರ್ಥಿಕ ಯೋಜನೆಗಳ ಬಗ್ಗೆ ಮತ್ತು ಆರ್ಥಿಕ, ವ್ಯವಹಾರ ಹಾಗೂ ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು. ಜನರಿಂದ ಜನರ ಸಂಪರ್ಕವನ್ನು ಹೆಚ್ಚಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಸಂಪರ್ಕವನ್ನು ಸುಧಾರಿಸುವ ಬಗ್ಗೆಯೂ ಅವರು ಸಮಾಲೋಚನೆ ನಡೆಸಿದರು.
ಚೆನ್ನೈ ಮತ್ತು ಜಾಫ್ನಾ ನಡುವೆ ಇತ್ತೀಚಿಗೆ ಆರಂಭವಾದ ವಿಮಾನ ಹಾರಾಟ ಈ ದಿಕ್ಕಿನಲ್ಲಿ ನಡೆದ ಪ್ರಯತ್ನಗಳ ಒಂದು ಭಾಗವಾಗಿದೆ. ಈ ನೇರ ಹಾರಾಟವು ಶ್ರೀಲಂಕಾದ ಉತ್ತರ ಭಾಗದ ತಮಿಳು ಜನರ ಸಂಪರ್ಕ ಆಯ್ಕೆಗಳನ್ನು ಹೆಚ್ಚಿಸುತ್ತದೆ ಮತ್ತು ಇದು ಅಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಹಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಎರಡೂ ದೇಶಗಳಿಗೆ ಸಂತೋಷದ ವಿಷಯವಾಗಿದೆ. ಈ ಹಿನ್ನೆಲೆಯಲ್ಲೂ ಇಬ್ಬರೂ ಪ್ರಧಾನಿಗಳು ತಮ್ಮ ಸಂಬಂಧವನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಸುಧಾರಿಸುವ ಪ್ರಯತ್ನಗಳ ಬಗ್ಗೆ ಚರ್ಚಿಸಿದರು.
ಶ್ರೀಲಂಕಾದ ಅಭಿವೃದ್ಧಿ ಪ್ರಯತ್ನಗಳಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ. ಕಳೆದ ವರ್ಷ ಘೋಷಿಸಿರುವ ಹೊಸ ಸಾಲಗಳ ನೆರವು ನಮ್ಮ ಅಭಿವೃದ್ಧಿ ಸಹಕಾರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ 48,000ಕ್ಕೂ ಹೆಚ್ಚು ಜನರಿಗೆ ಮನೆಗಳ ನಿರ್ಮಾಣ ಮಾಡುವ ಭಾರತೀಯ ವಸತಿ ಯೋಜನೆ ಪೂರ್ಣಗೊಂಡಿರುವುದಕ್ಕೆ ನವದೆಹಲಿ ಸಂತೋಷ ವ್ಯಕ್ತಪಡಿಸಿದೆ. ಇದಲ್ಲದೆ ಅಪ್-ಕಂಟ್ರಿ ಪ್ರದೇಶದಲ್ಲಿ ಭಾರತೀಯ ಮೂಲದ ತಮಿಳರಿಗಾಗಿ ಹಲವಾರು ಸಾವಿರ ಮನೆಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಪ್ರಧಾನಿ ರಾಜಪಕ್ಸೆ ಮತ್ತು ಮೋದಿ ಮೀನುಗಾರರ ಮಾನವೀಯ ವಿಷಯದ ಬಗ್ಗೆ ಚರ್ಚಿಸಿದರು. ಇದು ಎರಡೂ ದೇಶಗಳ ಜನರ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ವಿಷಯದಲ್ಲಿ ರಚನಾತ್ಮಕ ಮತ್ತು ಮಾನವೀಯ ವಿಧಾನವನ್ನು ಮುಂದುವರಿಸಲು ನವದೆಹಲಿ ಮತ್ತು ಕೊಲಂಬೊ ಒಪ್ಪಿಗೆ ಸೂಚಿಸಿವೆ.
ವಿದೇಶಾಂಗ ನೀತಿ ನಿರ್ಧಾರಗಳ ಕಾರಣದಿಂದಾಗಿ ದೇಶೀಯ ಷರತ್ತುಗಳನ್ನು ಹೇರಲಾಗುತ್ತಿದೆ ಎಂದು ಶ್ರೀಲಂಕಾದ ಪ್ರಧಾನಿ ಒತ್ತಿ ಹೇಳಿದರು. “ನಮಗೆ ಮೊದಲು ಅಭಿವೃದ್ಧಿ ಬೇಕಾಗಿದೆ, ಇರುವ ಸೀಮಿತ ಸಮಯದಲ್ಲಿ ಅಂದರೆ ಐದು ವರ್ಷಗಳಲ್ಲಿ ಫಲಿತಾಂಶ ನೀಡಬೇಕಾಗಿದೆ, ಇಲ್ಲದಿದ್ದರೆ ಜನ ನಮ್ಮನ್ನು ಓಡಿಸುತ್ತಾರೆ. ಹಿಂದೆ ಇದೇ ಆಗಿದ್ದು, ಈ ಹಿನ್ನೆಲೆಯಲ್ಲಿ ನಾವೀಗ ಶ್ರೀಲಂಕಾದ ಹಿತಾಸಕ್ತಿಗಳನ್ನು ಅತ್ಯುತ್ತಮವಾಗಿ ಪೂರೈಸುವತ್ತ ನೋಡುತ್ತೇವೆ” ಎಂದು ಅವರು ಹೇಳಿದರು. ಕೊಲಂಬೊ ಎದುರಿಸುತ್ತಿರುವ ಚೀನಾದ ಸಾಲದ ಬಗ್ಗೆ ಪ್ರತಿಕ್ರಿಯಿಸಿದ ರಾಜಪಕ್ಸೆ, ತಮ್ಮ ಸರ್ಕಾರ ಇದ್ದರೆ ಅದನ್ನು ಎಂದಿಗೂ ಅನುಮತಿಸುತ್ತಿರಲಿಲ್ಲ ಎಂದರು.
ಸಮನ್ವಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಇಬ್ಬರೂ ನಾಯಕರು ಬಹಿರಂಗವಾಗಿ ಮಾತನಾಡಿದರು. ಯುನೈಟೆಡ್ ಶ್ರೀಲಂಕಾದೊಳಗೆ ಸಮಾನತೆ, ನ್ಯಾಯ, ಶಾಂತಿ ಮತ್ತು ಗೌರವಕ್ಕಾಗಿ ತಮಿಳು ಜನರ ನಿರೀಕ್ಷೆಗಳನ್ನು ಶ್ರೀಲಂಕಾ ಸರ್ಕಾರ ಅರಿತುಕೊಳ್ಳಲಿದೆ ಎಂದು ಭಾರತೀಯ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕಾಗಿ ಶ್ರೀಲಂಕಾ ಸಂವಿಧಾನದ ಹದಿಮೂರನೇ ತಿದ್ದುಪಡಿ ಅನುಷ್ಠಾನ ಮಾಡಿ ಸಾಮರಸ್ಯ ಪ್ರಕ್ರಿಯೆಯನ್ನು ಮುಂದಕ್ಕೆ ಸಾಗಿಸಬೇಕಾಗಿದೆ.
ಸ್ಕ್ರಿಪ್ಟ್: ಪದಮ್ ಸಿಂಗ್, ಸುದ್ದಿ ವಿಶ್ಲೇಷಕ, ಎಐಆರ್