ಇಂಡಿಯಾ-ಆಫ್ರಿಕಾ ರಕ್ಷಣಾ ಮಂತ್ರಿಗಳ ಸಮಾವೇಶ

ಭಾರತ-ಆಫ್ರಿಕಾ ರಕ್ಷಣಾ ಮಂತ್ರಿಗಳ ಮೊದಲ ಸಮಾವೇಶವನ್ನು ಲಕ್ನೋದಲ್ಲಿ ಏರ್ಪಡಿಸಿದ್ದ ‘ಡಿಫೆಕ್ಸ್‌ಪೋ ಇಂಡಿಯಾ’ ಜೊತೆಯಲ್ಲಿ ನಡೆಸಲಾಯಿತು. ಆಫ್ರಿಕ ಖಂಡದ ದೇಶಗಳೊಂದಿಗೆ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಇದು ಭಾರತದ ಪ್ರಮುಖ ಉಪಕ್ರಮವಾಗಿದೆ. 1950ರ ದಶಕದಿಂದಲೂ ದೀರ್ಘಕಾಲದ ರಕ್ಷಣಾ ಸಹಭಾಗಿತ್ವಕ್ಕೆ ಅನುಗುಣವಾಗಿ,  ಆಫ್ರಿಕ ಖಂಡಕ್ಕೆ ತಯಾರಿಸಿದ ಉಪಕರಣಗಳನ್ನು ರಫ್ತು ಮಾಡಲು ಹೊಸ ಅವಕಾಶಗಳನ್ನು ಸೃಷ್ಟಿಸುವ ವೇದಿಕೆಯನ್ನು ಇದು ಭಾರತಕ್ಕೆ ಒದಗಿಸಿತು. 14 ಆಫ್ರಿಕ ದೇಶಗಳ ರಕ್ಷಣಾ ಮಂತ್ರಿಗಳು, ಸಂಸತ್ತಿನ ಸದಸ್ಯರು, 19 ರಕ್ಷಣಾ ಮತ್ತು ಸೇವಾ ಮುಖ್ಯಸ್ಥರು ಹಾಗೂ ಆಫ್ರಿಕ ದೇಶಗಳ 8 ಖಾಯಂ ಕಾರ್ಯದರ್ಶಿಗಳು ಸೇರಿದಂತೆ, ಆಫ್ರಿಕಾದ 154ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಮಟ್ಟದ ಭಾಗವಹಿಸುವಿಕೆ ರಕ್ಷಣಾ ಮತ್ತು ಸುರಕ್ಷತೆಯ ಬಗ್ಗೆ  ಭಾರತ-ಆಫ್ರಿಕ ಸಹಕಾರಕ್ಕೆ ನೀಡುತ್ತಿರುವ ಹೆಚ್ಚಿನ ಆದ್ಯತೆಗೆ ಸ್ಪಷ್ಟಿಕರಣವಾಗಿದೆ . 

ಪ್ರಸ್ತುತವಾಗಿ,  ಆಫ್ರಿಕ ದೇಶಗಳಿಗೆ ಶಾಂತಿ ಮತ್ತು ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. “ಸೈಲೆನ್ಸಿಂಗ್ ಗನ್ಸ್: ಆಫ್ರಿಕದ  ಅಭಿವೃದ್ಧಿಗೆ ಅನುಕೂಲಕರ ಪರಿಸ್ಥಿತಿಗಳನ್ನು ರಚಿಸುವುದು” ಎಂಬುದು ಆಫ್ರಿಕದ ಒಕ್ಕೂಟದ ವರ್ಷದ ವಿಷಯವಾಗಿದೆ. ಈ ಗುರಿ ಸಾಧಿಸಲು ಆಫ್ರಿಕನ್ ಒಕ್ಕೂಟದ ಮಾರ್ಗವು,  ಶಾಂತಿ, ಸುರಕ್ಷತೆ ಮತ್ತು ಅಭಿವೃದ್ಧಿಯ ನಡುವಿನ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿಯವರ SAGARನ (ವಲಯದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ)  ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ.

ರಕ್ಷಣಾ ಮತ್ತು ಭದ್ರತಾ ನಿಶ್ಚಿತಾರ್ಥವು ಹಲವಾರು ದಶಕಗಳಿಂದ ಭಾರತ-ಆಫ್ರಿಕ ಸಂಬಂಧಗಳ ಒಂದು ಭಾಗವಾಗಿದೆ. ವಸಾಹತೋತ್ತರ ನಂತರದ ಆಫ್ರಿಕಾದಲ್ಲಿ, ಘಾನಾದಲ್ಲಿ ವಾಯುಪಡೆ ಸ್ಥಾಪನೆಗೆ,   ಆಫ್ರಿಕಾದ ಅನೇಕ ದೇಶಗಳ ಸಿಬ್ಬಂದಿಯ ತರಬೇತಿಗೆ, ಇಥಿಯೋಪಿಯಾದಲ್ಲಿ ಸೇನೆ ಅಕಾಡೆಮಿ, ನೈಜೀರಿಯಾದ ರಕ್ಷಣಾ ಕಾಲೇಜು ಮತ್ತು ನೌಕಾ ಯುದ್ಧ ಕಾಲೇಜು ಸ್ಥಾಪನೆಗೆ ಭಾರತವು ನೆರವು ನೀಡಿರುವುದನ್ನು  ನೆನಪಿಸಿಕೊಳ್ಳಬಹುದು. UN ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ (UNPKO) ಸಕ್ರಿಯವಾಗಿ ಭಾಗವಹಿಸುವ ಮೂಲಕ ಆಫ್ರಿಕ ಖಂಡದಲ್ಲಿ ಶಾಂತಿಗೆ ಭಾರತವು ಸಹಕಾರಿಯಾಗಿದೆ.

ಸಮಾವೇಶದ ಸಮಯದಲ್ಲಿ, ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರದ ಮುನ್ನಡೆಯನ್ನು ಒಪ್ಪಿಕೊಂಡು,  ಬೆಳೆಯುತ್ತಿರುವ ಸವಾಲುಗಳ ನಡುವಿನಲ್ಲಿ, ಭಾರತದೊಂದಿಗೆ ವ್ಯಾಪಕವಾದ ರಕ್ಷಣಾ ಮತ್ತು ಭಯೋತ್ಪಾದನಾ ನಿಗ್ರಹ ಸಂಬಂಧಗಳನ್ನು ಆಫ್ರಿಕದ  ರಾಷ್ಟ್ರಗಳು ಒತ್ತಾಯಿಸಿದವು. ಜನರ ಜೀವನೋಪಾಯಕ್ಕೆ ಸಾಗರ ಮತ್ತು ಸಮುದ್ರಗಳ ಮಹತ್ವವನ್ನು ಮನಗಂಡ ಸಮಾವೇಶವು, ಕಡಲ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಕೋರಿದೆ. ತನ್ನ ಸದೃಢ ಭಾರತ-ಆಫ್ರಿಕಾ ಅಭಿವೃದ್ಧಿ ಸಹಭಾಗಿತ್ವದ ಮೂಲಕ ಆಫ್ರಿಕದ  ದೇಶಗಳಿಗೆ ರಕ್ಷಣಾ ಸಾಧನಗಳು ಮತ್ತು ಪೂರೈಕೆಯನ್ನು ಲಭ್ಯವಾಗುವಂತೆ ಭಾರತವು ಭರವಸೆ ನೀಡಿದೆ. ರಕ್ಷಣಾ ಸಹಕಾರಕ್ಕಾಗಿ ಪ್ರಧಾನಮಂತ್ರಿಗಳ ದೂರದೃಷ್ಟಿಗೆ ಅನುಗುಣವಾಗಿ ಮತ್ತು ಭಾರತ-ಆಫ್ರಿಕಾ ಸಂಬಂಧ ಹೆಚ್ಚಿಸಲು ಅವರ 10 ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಈ ಪ್ರಯತ್ನವನ್ನು ಗಣನೀಯವಾಗಿ ಹೆಚ್ಚಿಸಲಾಗುವುದು.

ಹಾರ್ನ್ ಆಫ್ ಆಫ್ರಿಕಾ, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಸಾಹೇಲ್ ಮತ್ತು ಗ್ರೇಟ್ ಲೇಕ್ಸ್ ಪ್ರದೇಶದ ಕೆಲವು ಭಾಗಗಳಲ್ಲಿ ಘರ್ಷಣೆಗಳು ಹರಡುತ್ತಲೇ ಇವೆ. ಆ ಖಂಡದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಮತ್ತು ಜಮಾಅತ್ ನುಸ್ರತ್ ಅಲ್-ಇಸ್ಲಾಂ ವಾಲ್ ಮುಸ್ಲಿಮೀನ್ (JNIM) ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕ ಗುಂಪುಗಳಿವೆ. ಕಡಲ್ಗಳ್ಳತನ, ಶಸ್ತ್ರಸಜ್ಜಿತ ದರೋಡೆ,  ಕಾನೂನುಬಾಹಿರ, ವರದಿ ಮಾಡದ ಮತ್ತು ಅನಿಯಂತ್ರಿತ ಮೀನುಗಾರಿಕೆ, ಕಳ್ಳಸಾಗಣೆ, ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆ ಮುಂತಾದ ಕಡಲ ಸವಾಲುಗಳು ಆಫ್ರಿಕಾದ ಹಿಂದೂ ಮಹಾಸಾಗರದ ಕರಾವಳಿ ದೇಶಗಳನ್ನು ದೀರ್ಘಕಾಲದಿಂದ ಕಾಡಿವೆ.

ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಕಡಲ ಅಭದ್ರತೆಯನ್ನು ನಿಭಾಯಿಸಲು, ‘2050 ಆಫ್ರಿಕಾದ ಇಂಟಿಗ್ರೇಟೆಡ್ ಮ್ಯಾರಿಟೈಮ್ (AIM) ಸ್ಟ್ರಾಟಜಿ’ ಎಂದು ಕರೆಯಲಾಗುವ ಪ್ಯಾನ್-ಆಫ್ರಿಕನ್ ಕಡಲ ತಂತ್ರವನ್ನು ಆಫ್ರಿಕನ್ ಒಕ್ಕೂಟ ಅಳವಡಿಸಿಕೊಂಡಿದೆ. “ಸಾಂಪ್ರದಾಯಿಕ ಕಡಲ ಸವಾಲುಗಳ ಉಪಶಮನ  ಹಾಗೂ ಆಫ್ರಿಕಾದ ‘ನೀಲಿ’ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿ” ಎರಡೂ ಒಳಗೊಂಡಿರುವುದರಿಂದ ಈ ತಂತ್ರವು ವಿಶಿಷ್ಟವಾಗಿದೆ.

ಗಮನಾರ್ಹವಾಗಿ, ವೈವಿಧ್ಯಮಯ ಖಂಡದೊಂದಿಗಿನ ಭಾರತದ ಹೆಚ್ಚುತ್ತಿರುವ ಸಂಬಂಧವು,  ಆಫ್ರಿಕಾದ ಇತರ ಬಾಹ್ಯ ಪಾಲುದಾರರ ಹಿತಾಸಕ್ತಿಗಳಿಗೆ ಭಿನ್ನವಾಗಿದೆ. ಭಾರತದ ಭಾಗವಹಿಸುವಿಕೆ ಆಫ್ರಿಕಾದಲ್ಲಿ ಸಂಪೂರ್ಣವಾಗಿ ’ಒಳಗೊಂಡ’ ನೀತಿಯಾಗಿದ್ದು,  ಆಫ್ರಿಕನ್ ಆದ್ಯತೆಗಳನ್ನು ಆಧರಿಸಿದೆ. ಸಂಬಂಧ ಕುರಿತು ಭಾರತದ ಶೋಷಣೆಯಿಲ್ಲದ ಮಾರ್ಗದ ಬಗ್ಗೆ ಸಮಾವೇಶದಲ್ಲಿ, ಹೆಚ್ಚು ಮೆಚ್ಚುಗೆ ಪಡೆದಿದೆ ಎಂಬುದು ಉಲ್ಲೇಖಿಸಬೇಕಾದ ಸಂಗತಿ. ಇತ್ತೀಚೆಗೆ, ಭಾರತದ ಒಂದು ನೆರೆಯ ರಾಷ್ಟ್ರ ಜಿಬೌಟಿಯ ಡೊರಲೇಹ್ ಬಂದರನ್ನು ಸಾಲ-ಬಲೆ ರಾಜತಾಂತ್ರಿಕತೆಯಿಂದ ಸ್ವಾಧೀನಪಡಿಸಿಕೊಂಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಭಾರತವು ಆಫ್ರಿಕಾದ ಹಿಂದೂ ಮಹಾಸಾಗರದ ಕರಾವಳಿ ದೇಶಗಳೊಂದಿಗೆ ಸದೃಢ  ಕಡಲ ಭದ್ರತಾ ಸಹಕಾರವನ್ನು ಹೊಂದಿದೆ. ಆಫ್ರಿಕ ದೇಶಗಳ ಕೋರಿಕೆಯ ಮೇರೆಗೆ, ಹಿಂದೂ ಮಹಾಸಾಗರ ಪ್ರದೇಶದಾದ್ಯಂತ  ಕಡಲ್ಗಳ್ಳತನ ವಿರೋಧಿ ಗಸ್ತು, ಕಣ್ಗಾವಲು ಮತ್ತು ಮಾನವೀಯ ಹಾಗೂ ವಿಪತ್ತು ಪರಿಹಾರ ಕಾರ್ಯಾಚರಣೆಗಾಗಿ ಭಾರತ ತನ್ನ ನೌಕಾಪಡೆಯನ್ನು ನಿಯೋಜಿಸಿದೆ. ಭಯೋತ್ಪಾದನೆ ಮತ್ತು ಕಡಲ್ಗಳ್ಳತನದ ಸಾಮಾನ್ಯ ಸವಾಲುಗಳ ನಡುವೆಯೂ,  ಆಫ್ರಿಕಾದಲ್ಲಿ ನಿವ್ವಳ ಭದ್ರತಾ ಪೂರೈಕೆದಾರನಾಗಿ ಭಾರತವು ಹೊರಹೊಮ್ಮಲು ಪ್ರಯತ್ನಿಸುತ್ತಿರುವುದರಿಂದ ಸೇನೆಯಿಂದ ಸೇನೆ ಸಂಬಂಧಗಳನ್ನು ವಿಸ್ತರಿಸಲಾಗುತ್ತಿದೆ. ಈ ಉದ್ದೇಶದಿಂದ ಆಫ್ರಿಕ ರಾಷ್ಟ್ರಗಳೊಂದಿಗೆ ಜಂಟಿ ಸೇನೆ ವ್ಯಾಯಾಮವನ್ನು ಹೆಚ್ಚಿಸುವತ್ತ ನವದೆಹಲಿ ಗಮನ ಹರಿಸಿದೆ.

ಸಮಾಲೋಚನೆಯಲ್ಲಿ ನಡೆದ ಮಾತುಕತೆಯಲ್ಲಿ  ಪರಸ್ಪರ ಕಾಳಜಿ ಮತ್ತು ಆದ್ಯತೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಭಾರತ-ಆಫ್ರಿಕಾ ಅಭಿವೃದ್ಧಿ ಸಹಭಾಗಿತ್ವವನ್ನು ಅರ್ಥಪೂರ್ಣವಾಗಿ ಹೆಚ್ಚಿಸಲಾಗುವುದು ಎಂದು ಆಶಿಸಲಾಗಿದೆ. ಸಮಾನತೆಯ ತತ್ವದ ಮೇಲೆ ನಿಂತಿರುವುದರಿಂದ,  ಆಫ್ರಿಕಾದೊಂದಿಗಿನ ಭಾರತದ ಪಾಲುದಾರಿಕೆ ಪಾರದರ್ಶಕವಾಗಿದೆ.

ಲೇಖನ: ಉತ್ತಮ್ ಕುಮಾರ್ ಬಿಸ್ವಾಸ್, ರಕ್ಷಣಾ ವಿಶ್ಲೇಷಕ