ವಿಯೆಟ್ನಾಂ:  ‘Act East’ ಕಾರ್ಯನೀತಿಯಲ್ಲಿ  ಒಂದು ಹಿಡಿಗೂಟ

ವಿಯೆಟ್ನಾಂನ ಸಮಾಜವಾದಿ ಗಣರಾಜ್ಯದ ಉಪಾಧ್ಯಕ್ಷ ಡ್ಯಾಂಗ್ ಥಾಯ್ ನ್ಗೊಕ್ ತಿನ್ಹ್ ಅವರು ಭಾರತದ ಉಪಾಧ್ಯಕ್ಷರಾದ ಶ್ರೀ ಎಂ. ವೆಂಕಯ್ಯ ನಾಯ್ಡು ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಗಾಗಿ ಭಾರತಕ್ಕೆ ಅಧಿಕೃತ ಭೇಟಿಕೊಟ್ಟರು. ಭಾರತದ ‘Act East’ ಪಾಲಿಸಿ ಮತ್ತು ಭಾರತದ ದೊಡ್ಡ ಇಂಡೋ-ಪೆಸಿಫಿಕ್ ಕಾರ್ಯತಂತ್ರದಲ್ಲಿ ವಿಯೆಟ್ನಾಂ ಮಹತ್ವದ  ಆಧಾರವಾಗಿದೆ. ಇದಲ್ಲದೆ, ಆಗ್ನೇಯ ಏಷ್ಯಾದೊಂದಿಗೆ ವ್ಯಾಪಕವಾದ ಆರ್ಥಿಕ ಮತ್ತು ಕಾರ್ಯತಂತ್ರದ ಸಂಪರ್ಕಗಳನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿದ್ದು, ಹನೋಯಿಯು CLMV (ಕಾಂಬೋಡಿಯಾ, ಲಾವೊ ಪಿಡಿಆರ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂ) ದೇಶಗಳ ಸಾಮಿಪ್ಯ ನವದೆಹಲಿಗೆ ಪ್ರಮುಖವಾಗಿದೆ.

ಭಾರತ-ವಿಯೆಟ್ನಾಂ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದು ಇತ್ತೀಚಿನ ಭೇಟಿಯ ಉದ್ದೇಶವಾಗಿತ್ತು. ಭಾರತ ಮತ್ತು ವಿಯೆಟ್ನಾಂ ಅನ್ನು ಸಂಪರ್ಕಿಸುವ ನೇರ ವಿಮಾನಗಳ ಘೋಷಣೆಯು ಉಪಾಧ್ಯಕ್ಷ ಡ್ಯಾಂಗ್ ಥಾಯ್ ನ್ಗೊಕ್ ತಿನ್ಹ್ ಅವರ ಭೇಟಿಯ ಒಂದು ಪ್ರಮುಖ ಅಂಶವಾಗಿತ್ತು. ಜೊತೆಗೆ, ವಾಯ್ಸ್ ಆಫ್ ವಿಯೆಟ್ನಾಂನ ನಿವಾಸ ಕಚೇರಿಯನ್ನು ದೆಹಲಿಯಲ್ಲಿ ಸ್ಥಾಪಿಸುವ ಬಗ್ಗೆ ಒಂದು  ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅವರ ಭೇಟಿಯ ಸಮಯದಲ್ಲಿ ವಿಯೆಟ್ನಾಂ ಉಪಾಧ್ಯಕ್ಷರು ಬೋಧ್ ಗಯಾಕ್ಕೆ ಭೇಟಿ ನೀಡಿದರು.

2016 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿಯೆಟ್ನಾಂಗೆ ಭೇಟಿ ನೀಡಿದಾಗ, ನಿಯಮಗಳ ಆಧಾರಿತ ಪ್ರಾದೇಶಿಕ ಕ್ರಮವನ್ನು ಬೆಂಬಲಿಸುವ ಗುರಿಯೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಏರಿಸಲಾಯಿತು. ಭಾರತದ ‘Act East’  ಪಾಲಿಸಿಯ ಬಗ್ಗೆ ವಿಯೆಟ್ನಾಂ ಸಕಾರಾತ್ಮಕ ದೃಷ್ಟಿಕೋನವನ್ನು ಕಾಯ್ದುಕೊಂಡಿದ್ದು, ಪ್ರಾದೇಶಿಕ ವಿಷಯಗಳ ಬಗ್ಗೆ ಭಾರತದ ಸದೃಢವಾದ ಪಾತ್ರವನ್ನು ಸ್ವಾಗತಿಸುತ್ತದೆ. ಉನ್ನತ ಮಟ್ಟದ ಭೇಟಿಗಳ ವಿನಿಮಯ, ಸೇವೆಯಿಂದ ಸೇವೆಗೆ ಸಹಕಾರ, ನೌಕಾ ಹಡಗು ಭೇಟಿಗಳು, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ರಕ್ಷಣಾ ಸಾಧನಗಳ ಸಂಗ್ರಹಣೆ ಮತ್ತು ತಂತ್ರಜ್ಞಾನದ ವರ್ಗಾವಣೆ, ಪ್ರಾದೇಶಿಕ ವೇದಿಕೆಗಳಲ್ಲಿನ ಸಹಕಾರ  (ASEAN ರಕ್ಷಣಾ ಮಂತ್ರಿಗಳ ಸಭೆ-ಪ್ಲಸ್, ಪೂರ್ವ ಏಷ್ಯಾ ಶೃಂಗ, ಮೆಕಾಂಗ್ ಗಂಗಾ ಸಹಕಾರ, ಏಷ್ಯಾ ಯುರೋಪ್ ಸಭೆ, UN ಮತ್ತು WTO) ಇವುಗಳಿಂದ ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಹಕಾರವು ಬಲಗೊಂಡಿದೆ. 

2016ರಲ್ಲಿ ಭಾರತವು ರಕ್ಷಣಾ ಕ್ಷೇತ್ರಕ್ಕೆ 500 ಮಿಲಿಯನ್ US ಡಾಲರ್ಸ್   ಸಾಲ ನೀಡಿದೆ. ರಕ್ಷಣಾ ಸಂಗ್ರಹಣೆಯ ಲೈನ್ ಆಫ್ ಕ್ರೆಡಿಟ್ ಬಳಸಿ ಕಡಲಾಚೆಯ ಹೈಸ್ಪೀಡ್ ಪೆಟ್ರೋಲ್ ಗಸ್ತು ಬೋಟ್‌ಗಳನ್ನು ಪಡೆಯಲು ಲಾರ್ಸೆನ್ ಮತ್ತು ಟೌಬ್ರೊ ಹಾಗು ವಿಯೆಟ್ನಾಂ ಬಾರ್ಡರ್ ಗಾರ್ಡ್ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇದಲ್ಲದೆ, ನ್ಹಾ ಟ್ರಾಂಗ್‌ನ ದೂರಸಂಪರ್ಕ ವಿಶ್ವವಿದ್ಯಾಲಯದಲ್ಲಿ ಆರ್ಮಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣಕ್ಕಾಗಿ ಭಾರತವು 5 ದಶ ಲಕ್ಷ                    US ಡಾಲರ್ಸ್ ಅನುದಾನವನ್ನು ನೀಡಿದೆ. ಇದಲ್ಲದೆ, ಗಡಿಯಾಂತರದ ಅಪರಾಧಗಳನ್ನು ಎದುರಿಸಲು ಉಭಯ ದೇಶಗಳ ಕರಾವಳಿ ಕಾವಲುಗಾರರ ನಡುವೆ ಒಪ್ಪಂದವಾಗಿದೆ. ಜೊತೆಗೆ, ವಿಯೆಟ್ನಾಂನ ಸಾರ್ವಜನಿಕ ಭದ್ರತಾ ಸಚಿವಾಲಯ ಹಾಗು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ ಸೈಬರ್ ಸುರಕ್ಷತೆಯ ಬಗ್ಗೆ ಒಂದು ಒಪ್ಪಂದವಿದೆ.

ರಕ್ಷಣಾ ಮತ್ತು ಭದ್ರತಾ ಸಹಕಾರದ ಜೊತೆಗೆ, ದ್ವಿಪಕ್ಷೀಯ ಸಂಬಂಧಗಳಲ್ಲಿ ಆರ್ಥಿಕ ಸಹಕಾರವು ಒಂದು ಪ್ರಮುಖ ಆಧಾರಸ್ತಂಭವಾಗಿದೆ. ಹನೋಯಿಯ ಅಗ್ರ ಹತ್ತು ವ್ಯಾಪಾರ ಪಾಲುದಾರರಲ್ಲಿ ಭಾರತವು ಒಂದಾಗಿ ಕಾಣಿಸಿಕೊಂಡಿದೆ. ASEAN ಒಳಗೆ, ಸಿಂಗಾಪುರನಂತರ  ವಿಯೆಟ್ನಾಂ ದೇಶವು ಭಾರತದ ಎರಡನೇ ಅತಿದೊಡ್ಡ ರಫ್ತು ತಾಣವಾಗಿದೆ ಮತ್ತು ಇಂಡೋನೇಷ್ಯಾ, ಸಿಂಗಾಪುರ್ ಮತ್ತು ಮಲೇಷ್ಯಾನಂತರ, ಉಡುಪು ಮತ್ತು ಜವಳಿ, ಔಷಧಗಳು, ಕೃಷಿ ಸರಕುಗಳು, ಚರ್ಮ ಮತ್ತು ಪಾದರಕ್ಷೆಗಳು ಹಾಗು ಎಂಜಿನಿಯರಿಂಗ್ ಸೇರಿದಂತೆ ವಿಶೇಷವಾಗಿ ಈ ಐದು ಪ್ರಮುಖ ಕ್ಷೇತ್ರಗಳಲ್ಲಿ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ.

ಆಗ್ನೇಯ ಏಷ್ಯಾದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ, ವಿಯೆಟ್ನಾಂ ಭಾರತಕ್ಕೆ ಹಲವಾರು ಅವಕಾಶಗಳನ್ನು ನೀಡುತ್ತದೆ.   ಭಾರತವು ಶಕ್ತಿ, ಖನಿಜ ಪರಿಶೋಧನೆ, ಕೃಷಿ ಸಂಸ್ಕರಣೆ, ಸಕ್ಕರೆ ಉತ್ಪಾದನೆ, ಕೃಷಿ ರಾಸಾಯನಿಕಗಳು, ಐಟಿ ಮತ್ತು ವಾಹನ ಘಟಕಗಳಲ್ಲಿ ಹೂಡಿಕೆ ಮಾಡಿದೆ. ವಿವಾದದ ದಕ್ಷಿಣ ಚೀನಾ ಸಮುದ್ರದಲ್ಲಿ ಸೇರಿದಂತೆ ಭಾರತೀಯ ಹೂಡಿಕೆಗಳನ್ನು ವಿಯೆಟ್ನಾಂ ಸ್ವಾಗತಿಸಿದೆ. ವಿಯೆಟ್ನಾಂನಲ್ಲಿನ  ಉತ್ಪಾದಿಸುವ ಸ್ವತ್ತಾದ ಬ್ಲಾಕ್ 6.1 ಮತ್ತು ಫು ಖಾನ್ಹ್ ಕಡಲಾಚೆಯ ಜಲಾನಯನ ಪ್ರದೇಶದಲ್ಲಿನ ಪರಿಶೋಧನಾ ಬ್ಲಾಕ್ 128 ಆಸ್ತಿ ಒಳಗೊಂಡ ಹೈಡ್ರೋಕಾರ್ಬನ್ ಎಕ್ಸ್‌ಪ್ಲೋರೇಶನ್ ಬ್ಲಾಕ್‌ಗಳಲ್ಲಿ ONGC-ವಿದೇಶ್ ಪಾಲು ಹೊಂದಿದೆ. ONGCಯಲ್ಲದೆ, ಟಾಟಾ ಪವರ್, ರಿಲಯನ್ಸ್ ಇಂಡಸ್ಟ್ರೀಸ್, ಗಿಂಪೆಕ್ಸ್, ಜೆಕೆ ಟೈರ್ಸ್, ಮತ್ತು ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಸೇರಿದಂತೆ ಹಲವಾರು ಭಾರತೀಯ ಕಂಪನಿಗಳು ವಿಯೆಟ್ನಾಂನಲ್ಲಿ ವ್ಯಾಪಾರ ಅವಕಾಶಗಳನ್ನು ಅನುಸರಿಸುತ್ತಿವೆ.

ಭಾರತ-ವಿಯೆಟ್ನಾಂ ಕಾರ್ಯತಂತ್ರದ ಸಹಭಾಗಿತ್ವದ ಬೇರುಗಳನ್ನು ಇತಿಹಾಸದಿಂದ ಗುರುತಿಸಬಹುದು. 1954 ರಲ್ಲಿ, ಡಿಯೆನ್ ಬೀನ್ ಫುನಲ್ಲಿ  ಫ್ರೆಂಚ್ ವಿರುದ್ಧ ವಿಯೆಟ್ನಾಂ ಜಯಗಳಿಸಿದ ನಂತರ ಮೊದಲ ಬೇಟಿಗರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಒಬ್ಬರು. ತರುವಾಯ 1958ರಲ್ಲಿ, ಭಾರತದಲ್ಲಿ ಅಂಕಲ್ ಹೋ ಎಂದು ಪರಿಗಣಿಸಲ್ಪಟ್ಟ ಅಧ್ಯಕ್ಷ ಹೋ ಚಿ ಮಿನ್ಹ್ ಭಾರತಕ್ಕೆ ಭೇಟಿ ನೀಡಿದರು. ಬಳಿಕ ಭಾರತದ ಮೊದಲ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರು 1959ರಲ್ಲಿ ವಿಯೆಟ್ನಾಂಗೆ ಭೇಟಿ ನೀಡಿದರು. ಅಂದಿನಿಂದ, ಉನ್ನತ ಮಟ್ಟದ ಭೇಟಿಗಳು ಮುಂದುವರೆದಿದ್ದು,  ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಇವು ಕಾರಣವಾಗಿದೆ.

ವಿಯೆಟ್ನಾಂ ಭಾರತದ ‘Act East’ ಪಾಲಿಸಿಯ ಹೃದಯ ಭಾಗದಲ್ಲಿರುವುದರಿಂದ,  ಐತಿಹಾಸಿಕ ಪ್ರಭಾವಗಳನ್ನು, ಸಾಮಾನ್ಯ ಪ್ರಾದೇಶಿಕ ಮತ್ತು ಜಾಗತಿಕ ಉದ್ದೇಶಗಳನ್ನು  ಗಮನದಲ್ಲಿಟ್ಟುಕೊಂಡು, ಭಾರತ-ವಿಯೆಟ್ನಾಂ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಏರಿಸುವಲ್ಲಿ ಹೂಡಿಕೆ ಮಾಡುವುದನ್ನು ಭಾರತ ಮುಂದುವರಿಸುತ್ತದೆ ಮತ್ತು ವಿಶಾಲವಾದ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು, ಭೌಗೋಳಿಕ ಕಾರ್ಯತಂತ್ರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತೀವ್ರಗೊಳಿಸುತ್ತದೆ.

ಲೇಖನ: ಡಾ. ಟಿಟ್ಲಿ ಬಸು ಪೂರ್ವ ಮತ್ತು ಆಗ್ನೇಯ ಏಷ್ಯಾದ ಕಾರ್ಯತಂತ್ರದ ವಿಶ್ಲೇಷಕ.