ಇಂಡಿಯಾ-ಯುರೋಪಿಯನ್ ಯೂನಿಯನ್ ಕಾರ್ಯತಂತ್ರ ಸಹಭಾಗಿತ್ವದ ಮಹತ್ವ

ಯುರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮಂಡಳಿ (ಎಫ್‌ಎಸಿ) ಜೊತೆ ಚರ್ಚಿಸಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಬ್ರಸೆಲ್ಸ್‌ಗೆ ಭೇಟಿ ನೀಡಿದರು. ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿ / ವಿದೇಶಾಂಗ ವ್ಯವಹಾರ ಮತ್ತು ಭದ್ರತಾ ನೀತಿ ಉಪಾಧ್ಯಕ್ಷ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯಿತು. 2019ರ ಡಿಸೆಂಬರ್‌ನಲ್ಲಿ ಹೊಸ ಆಯೋಗದ ಅಧಿಕಾರ ವಹಿಸಿಕೊಂಡ ಬಳಿಕ ಭಾರತೀಯ ವಿದೇಶಾಂಗ ಸಚಿವರು ಇಯುಗೆ ನೀಡಿದ ಮೊದಲ ಭೇಟಿ ಇದು.
ಇಯು ಉನ್ನತ ಪ್ರತಿನಿಧಿ ಮತ್ತು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳ 27 ವಿದೇಶಾಂಗ ಮಂತ್ರಿಗಳು ಸೇರಿ ವಿದೇಶಾಂಗ ವ್ಯವಹಾರಗಳ ಮಂಡಳಿಯನ್ನು ರಚಿಸಿದ್ದಾರೆ. ವಿದೇಶಿ ನೀತಿ, ರಕ್ಷಣಾ ಮತ್ತು ಸುರಕ್ಷತೆ, ವ್ಯಾಪಾರ, ಅಭಿವೃದ್ಧಿ ಸಹಕಾರ ಹಾಗೂ ಮಾನವೀಯ ನೆರವುಗಳ ವಿಷಯದಲ್ಲಿ ಯುರೋಪಿಯನ್ ಒಕ್ಕೂಟ ತೆಗೆದುಕೊಳ್ಳುವ ಕ್ರಮಕ್ಕೆ ಇದು ಕಾರಣವಾಗಿದೆ. ಡಾ. ಜೈಶಂಕರ್ ಅವರು ಎಫ್‌ಎಸಿ, ಭಾರತದ ವಿದೇಶಾಂಗ ನೀತಿಯ ಆದ್ಯತೆಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ದೃಷ್ಟಿಕೋನ ಎಂಬ ವಿಷಯಗಳನ್ನು ಹಂಚಿಕೊಂಡರು. ಅವರ ಮಾತುಗಳು ಎರಡು ದೊಡ್ಡ ಪ್ರಜಾಪ್ರಭುತ್ವಗಳನ್ನು ಪ್ರತಿನಿಧಿಸುವ ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಸಾಮಾನ್ಯ ಮೌಲ್ಯಗಳಾದ ಪ್ರಜಾಪ್ರಭುತ್ವ, ಬಹುಪಕ್ಷೀಯತೆ, ನಿಯಮ-ಆಧಾರಿತ ಅಂತರರಾಷ್ಟ್ರೀಯ ಕ್ರಮ, ಡಬ್ಲ್ಯುಟಿಒ ಜೊತೆಗಿನ ನಿಯಮ-ಆಧಾರಿತ ಅಂತರರಾಷ್ಟ್ರೀಯ ವ್ಯಾಪಾರ, ಪರಸ್ಪರ ಹಂಚಿಕೆಯ ಬದ್ಧತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕೇಂದ್ರೀಕೃತವಾಗಿದ್ದವು‌.
ಇತ್ತೀಚೆಗೆ ಯುರೋಪಿಯನ್ ಯೂನಿಯನ್ ಫಾರ್ ಫಾರಿನ್ ಅಫೇರ್ಸ್ ಮತ್ತು ಸೆಕ್ಯುರಿಟಿ ಪಾಲಿಸಿಯ ಉನ್ನತ ಪ್ರತಿನಿಧಿ ಜೋಸೆಫ್ ಬೊರೆಲ್ ಫಾಂಟೆಲ್ಲೆಸ್ ಭಾರತಕ್ಕೆ ಭೇಟಿ ನೀಡಿದ್ದರು. 2020ರ ರೈಸಿನಾ ಸಂವಾದದಲ್ಲಿ ಭಾಗವಹಿಸಿದ್ದರು. ಭಾರತ ಮತ್ತು ಯುರೋಪಿಯನ್ ಯೂನಿಯನ್ (ಇಯು) ನಡುವಿನ ಸಾಮ್ಯತೆಗಳನ್ನು ಪುನರುಚ್ಚರಿಸಿದ ಫಾಂಟೆಲ್ಲೆಸ್ ಅವರು ‘ಎರಡೂ ದೇಶಗಳು ನಿಯಮ-ಆಧಾರಿತ ಬಹುಪಕ್ಷೀಯ ಆದೇಶವನ್ನು ರಕ್ಷಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಇವೆ.
ಡಬ್ಲ್ಯುಟಿಒನ ವಸಾಹತು ವಿವಾದ ಕಾರ್ಯವಿಧಾನವು ಯುರೋಪ್, ಭಾರತ ಮತ್ತು ಅನೇಕ ಆಗ್ನೇಯ ಏಷ್ಯಾದ ದೇಶಗಳಿಗೆ ಕಳವಳಕ್ಕೆ ಕಾರಣವಾಗಿದೆ. ಈ ಅಸ್ತವ್ಯಸ್ತತೆಯನ್ನು ಮುರಿಯಲು ಯೂರೋಪ್ ಒಕ್ಕೂಟವು ಪ್ರಸ್ತಾಪಗಳನ್ನು ರೂಪಿಸಿದೆ’ ಎಂದು ಉನ್ನತ ಪ್ರತಿನಿಧಿಗಳ ಸಂವಾದಕ್ಕೆ ತಿಳಿಸಿದ್ದರು. “ಈ ಸಮಸ್ಯೆಯನ್ನು ಪರಿಹರಿಸುವುದು ಮತ್ತು ಪ್ರಾಯೋಗಿಕವಾದ ಪರಿಹಾರಗಳನ್ನು ನೀಡುವುದು ಎರಡೂ ದೇಶಗಳ ಸ್ಪಷ್ಟವಾದ ಹಿತಾಸಕ್ತಿಯಾಗಿದೆ” ಎಂದು ಕೂಡ ಹೇಳಿದ್ದರು.
ಕಡಲ್ಗಳ್ಳತನ ಮತ್ತು ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆಯಂತಹ ಹಲವಾರು ಸವಾಲುಗಳು ಜಾಗತಿಕ ಸಮುದಾಯಕ್ಕೆ ಆತಂಕವನ್ನು ಸೃಷ್ಟಿಸಿದಾಗ ಕಡಲ ಸುರಕ್ಷತೆಯನ್ನು ಬಲಪಡಿಸುವುದು ಅತ್ಯಂತ ಅಗತ್ಯವಾದ ಕೆಲಸವಾಗಲಿದೆ. ಆದ್ದರಿಂದ ಸಮುದ್ರ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆಫ್ರಿಕಾದ ಹಾರ್ನ್ ಮತ್ತು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಸಮುದ್ರದಲ್ಲಿ ಕಡಲ್ಗಳ್ಳತನವನ್ನು ಎದುರಿಸಲು ಭಾರತದೊಂದಿಗಿನ ಸಹಕಾರ ನೀಡುತ್ತಿರುವ ‘ಆಪರೇಷನ್ ಅಟ್ಲಾಂಟಾ’ ಉತ್ತಮ ಉದಾಹರಣೆಯಾಗಿದೆ.
2025ರಲ್ಲಿ ಭಾರತ-ಇಯು ಕಾರ್ಯತಂತ್ರದ ಸಹಭಾಗಿತ್ವ ಹೇಗಿರಬೇಕೆಂಬ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂದು ಇಯು ಉನ್ನತ ಪ್ರತಿನಿಧಿ ಒತ್ತಿಹೇಳಿದ್ದಾರೆ. ಇದು ಭದ್ರತೆಯಿಂದ ಹಿಡಿದು ಡಿಜಿಟಲ್ ಅಥವಾ ಹವಾಮಾನ ಬದಲಾವಣೆವರೆಗಿನ ಸಹಕಾರವನ್ನು ಒಳಗೊಂಡಿದೆ.
ಎರಡೂ ದೇಶಗಳು ತಮ್ಮ ಒಪ್ಪಂದಗಳನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ – ವಿಶೇಷವಾಗಿ ಹವಾಮಾನ ಬದಲಾವಣೆ, ರಕ್ಷಣೆ, ಭದ್ರತೆ, ಸಂಪರ್ಕ, ಡಿಜಿಟಲ್ ಆರ್ಥಿಕತೆ, ವ್ಯಾಪಾರ ಮತ್ತು ಹೂಡಿಕೆ ಹಾಗೂ ಭಯೋತ್ಪಾದನೆಯ ಭೀತಿಯನ್ನು ಪರಿಹರಿಸುವಂತಹ ಸಾಮಾನ್ಯ ಆದ್ಯತೆಗಳ ಕಡೆಗೆ ಗಮನಹರಿಸುವ ಹಾಗೂ ಬಹುಪಕ್ಷೀಯತೆಯನ್ನು ಕಾಪಾಡುವ ಕುರಿತಾದ ಒಪ್ಪಂದಗಳಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ, ಭಾರತೀಯ ವಿದೇಶಾಂಗ ಸಚಿವರು ಯುರೋಪಿಯನ್ ಗ್ರೀನ್ ಡೀಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರ ಫ್ರಾನ್ಸ್ ಟಿಮ್ಮರ್‌ಮ್ಯಾನ್ಸ್, ವ್ಯಾಪಾರ ಆಯುಕ್ತ ಫಿಲ್ ಹೊಗನ್ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವದ ಆಯುಕ್ತರಾದ ಜುಟ್ಟಾ ಉರ್ಪಿಲೈನೆನ್ ಅವರನ್ನು ಭೇಟಿಯಾದರು.
ಡಾ. ಜೈಶಂಕರ್ ಅವರು ಯುರೋಪಿಯನ್ ಒಕ್ಕೂಟದ 27 ಸದಸ್ಯ ರಾಷ್ಟ್ರಗಳ ಯುರೋಪಿಯನ್ ಕೌನ್ಸಿಲ್ ಆಫ್ ಹೆಡ್ಸ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರನ್ನು ಭೇಟಿ ಮಾಡಿ ಎಫ್‌ಎಸಿಯೊಂದಿಗೆ ಭಾರತ ನಡೆಸಿರುವ ಚರ್ಚೆಗಳನ್ನು ಅವರಿಗೆ ತಿಳಿಸಿದರು.
ವಿದೇಶಾಂಗ ಸಚಿವ ಜೈಶಂಕರ್, ಬೆಲ್ಜಿಯಂ ಸಹವರ್ತಿ ಫಿಲಿಪ್ ಗೋಫಿನ್ ಅವರನ್ನು ಭೇಟಿಯಾದರು ಮತ್ತು ಫೆಬ್ರವರಿ 2020ಕ್ಕೆ ಯುಎನ್‌ಎಸ್‌ಸಿ ಅಧ್ಯಕ್ಷ ಸ್ಥಾನವನ್ನು ಬೆಲ್ಜಿಯಂ ವಹಿಸಿಕೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಬಹುಪಕ್ಷೀಯ ವೇದಿಕೆಗಳಲ್ಲಿ ಮತ್ತು ಪ್ರಾದೇಶಿಕವಾಗಿ ಪರಸ್ಪರ ಹಂಚಿಕೆಯ ಆಸಕ್ತಿಗಳು ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಅನುಸರಿಸಬೇಕಾದ ಭಾರತ-ಬೆಲ್ಜಿಯಂ ನಡುವಿನ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚಿಸಿದರು.
ಹೊಸ ವಿದೇಶಿ ಸಂಸತ್ತಿನಲ್ಲಿ ವಿವಿಧ ಸದಸ್ಯ ರಾಷ್ಟ್ರಗಳು ಮತ್ತು ರಾಜಕೀಯ ಗುಂಪುಗಳನ್ನು ಪ್ರತಿನಿಧಿಸುವ ಯುರೋಪಿಯನ್ ಪಾರ್ಲಿಮೆಂಟ್ (ಎಂಇಪಿ) ಸದಸ್ಯರ ಗುಂಪಿನ ಜೊತೆ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಇದು ಎಂಇಪಿಗಳ ಜೊತೆ ಅವರ ಎರಡನೇ ಸಂವಹನವಾಗಿತ್ತು.
2020ರ ಮಾರ್ಚ್ ನಲ್ಲಿ ನಡೆಯಲಿರುವ ಭಾರತ-ಇಯು ಶೃಂಗಸಭೆಯು ಭಾರತ-ಇಯು ಸಂಬಂಧಗಳು ಮೇಲ್ಮುಖವಾಗಿ ಸಾಗಲು ಪ್ರೇರಕವಾಗಿರಲಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2025ರ ಭಾರತ-ಇಯು ಕಾರ್ಯತಂತ್ರದ ಸಹಭಾಗಿತ್ವ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಮತ್ತು ಮುಂದಿನ ಭಾರತ-ಯುರೋಪ್ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಅನುಮೋದನೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಬ್ರಸೆಲ್ಸ್‌ಗೆ ಭೇಟಿ ಕೊಡುವ ನಿರೀಕ್ಷೆಯಿದೆ. ಇದರಿಂದ 27 ಸದಸ್ಯ ಯುರೋಪಿಯನ್ ಒಕ್ಕೂಟದೊಂದಿಗಿನ ಭಾರತದ ಸಂಬಂಧಗಳು ಬ್ರೆಕ್ಸಿಟ್ ನಂತರದ ಇಯುನಲ್ಲಿ ಮಹತ್ವವನ್ನು ಪಡೆದುಕೊಳ್ಳಲಿವೆ.
ಸ್ಕ್ರಿಪ್ಟ್: ಪದಮ್ ಸಿಂಗ್, ಎಐಆರ್ ಸುದ್ದಿ ವಿಶ್ಲೇಷಕ