ಅಮೆರಿಕ-ಅಫ್ಘಾನಿಸ್ತಾನ ಶಾಂತಿ-ಒಪ್ಪಂದ: ಭರವಸೆ ಅಥವಾ ಭಯ?

ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಅಮೆರಿಕಾ ಮತ್ತು ತಾಲಿಬಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಎರಡು ದಿನಗಳ ನಂತರ,  ಅಫ್ಘಾನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಪಡೆಗಳ (ANDSF) ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ತಾಲಿಬಾನ್ ಘೋಷಿಸಿತು. ಒಂಬತ್ತು ಸುತ್ತಿನ ಚರ್ಚೆಗಳ ನಂತರ, ಕತಾರ್‌ನ ದೋಹಾದಲ್ಲಿ ಅಮೆರಿಕಾ  ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್ಜಾದ್ ಮತ್ತು ತಾಲಿಬಾನ್ ಉಪನಾಯಕ ಮುಲ್ಲಾ ಅಬ್ದುಲ್ ಘನಿ ಬಿರಾದಾರ್ ನಡುವೆ ಬಹುನಿರೀಕ್ಷಿತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಶಾಂತಿ ಒಪ್ಪಂದವು ನಾಲ್ಕು ಪ್ರಮುಖ ಅಂಶಗಳನ್ನು ಹೊಂದಿದೆ: ಕದನ ವಿರಾಮ, ವಿದೇಶಿ ಪಡೆಗಳನ್ನು ಹಿಂತೆಗೆದುಕೊಳ್ಳುವುದು, ಒಳ-ಅಫಘಾನ್ ಮಾತುಕತೆಗಳು ಮತ್ತು ಭಯೋತ್ಪಾದನೆ ನಿಗ್ರಹದ ಭರವಸೆಗಳು. ಒಪ್ಪಂದದ ಪ್ರಕಾರ, 135 ದಿನಗಳಲ್ಲಿ ಅಮೆರಿಕಾ ಹೆಜ್ಜೆಗುರುತನ್ನು 8,600ಕ್ಕೆ ಇಳಿಸುವ ಗುರಿಯೊಂದಿಗೆ 10 ದಿನಗಳೊಳಗೆ ತನ್ನ ಪಡೆಗಳು ಹಿಂದೆ ಸರಿಯಲು ಪ್ರಾರಂಭಿಸುತ್ತವೆ ಎಂದು ಒಪ್ಪಿಕೊಂಡಿದೆ. ಅಫ್ಘಾನಿಸ್ತಾನದಿಂದ ಅಮೆರಿಕಾ   ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು 14 ತಿಂಗಳ ಕಾಲಮಿತಿಯನ್ನು ಈ ಒಪ್ಪಂದವು ನೀಡುತ್ತದೆ.

ಅದೇ ಸಮಯದಲ್ಲಿ, ಮಾರ್ಚ್ 20ರೊಳಗೆ 5,000 ತಾಲಿಬಾನ್ ಕೈದಿಗಳ ಬಿಡುಗಡೆ ಕೋರಿ ತಾಲಿಬಾನನ್ನು ತಕ್ಷಣ ಮತ್ತು ಗಣನೀಯವಾಗಿ ಬಲಪಡಿಸಲು ಅಮೆರಿಕ ಸಹ ಒಪ್ಪಿದೆ. ಇದಲ್ಲದೆ, ನಂತರದ ಮೂರು ತಿಂಗಳ ಅವಧಿಯಲ್ಲಿ ಉಳಿದ ಎಲ್ಲ ಕೈದಿಗಳನ್ನು ಬಿಡುಗಡೆ ಮಾಡಲು ವಾಷಿಂಗ್ಟನ್ ಒಪ್ಪಿದೆ. ಆದಾಗ್ಯೂ, ಈ ಒಪ್ಪಂದವು ದೇಶೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಯ ಮತ್ತು ಭರವಸೆಗಳನ್ನು ಹುಟ್ಟಿಸಿದೆ. ಅಫಘಾನ್ ಜನರು  ಮತ್ತು ಹೊರಗಿನ ಪ್ರಪಂಚದೊಂದಿಗಿನ ಕಠಿಣ-ಸಿದ್ಧಾಂತದ ತಾಲಿಬಾನಿನ ವಿಧಾನ ಮತ್ತು ಇತರ ತೀವ್ರಗಾಮಿ ಗುಂಪುಗಳೊಂದಿಗಿನ ಅದರ ಸಂಬಂಧ ಈ ಭಯಕ್ಕೆ ಮೂಲ. ಅಫ್ಘಾನಿಸ್ತಾನದಿಂದ ಅಮೆರಿಕ ಸೈನ್ಯವು ಹಿಂದೆ ಸರಿಯುವುದರಿಂದ ಭದ್ರತಾ ನಿರ್ವಾತ ಉಂಟಾಗಿ, ಇಡೀ ದಕ್ಷಿಣ ಏಷ್ಯಾ ಪ್ರದೇಶವನ್ನು ಅಸ್ಥಿರಗೊಳಿಸಬಹುದು ಎಂಬ ಭಯ ಹಲವರಿಗಿದೆ.

ಶಾಂತಿ ಪ್ರಕ್ರಿಯೆಯನ್ನು ಬಹುಪಾಲು ಆಫ್ಘನ್ನರು ಬೆಂಬಲಿಸುತ್ತಿದ್ದರೆ, ಅಧಿಕಾರ ಹಂಚಿಕೊಳ್ಳುವುದು, ನಿಶ್ಶಸ್ತ್ರೀಕರಣ ಮತ್ತು ತಾಲಿಬಾನ್ ಹೋರಾಟಗಾರರನ್ನು ಅಫಘಾನ್ ನಾಗರಿಕ ಸಮಾಜಕ್ಕೆ ಮರುಸಂಘಟಿಸುವುದು ಸೇರಿದಂತೆ ಹಲವು ವಿಷಯಗಳು ಅಫಘಾನ್ ಆಂತರಿಕ ಮಾತುಕತೆಗಳ ಮೂಲಕ ಕಾರ್ಯರೂಪಕ್ಕೆ ಬರಬೇಕಿದೆ. ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳ ಭವಿಷ್ಯ ಮತ್ತು ಅದರ ಸಂವಿಧಾನವನ್ನು ನಿರ್ಧರಿಸುವುದು ಸಹ ಸಮಸ್ಯೆಯ ವಿಷಯವಾಗಿದೆ. ಇದಲ್ಲದೆ, ಜನಾಂಗೀಯ, ಪಂಥೀಯ ಮತ್ತು ಬುಡಕಟ್ಟು ಜನಾಂಗದವರಿಂದ ಪೀಡಿತವಾದ ದುರ್ಬಲ ಅಫಘಾನ್ ಕೇಂದ್ರ ಸರ್ಕಾರದ  ಸ್ಥಿತಿಯು ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಬಹುದಾಗಿದೆ. ಕಳೆದ ಹದಿನೆಂಟು ವರ್ಷಗಳಲ್ಲಿ ಯಾವುದೇ ಗೊತ್ತಾದ ಸಮಯಕ್ಕೆ ಹೋಲಿಸಿದರೆ ಈಗಿನ ತಾಲಿಬಾನ್ ಹೆಚ್ಚು ಬಲಶಾಲಿಯಾಗಿದೆ. ಅಂದಾಜು ಅರವತ್ತು ಸಾವಿರ ಹೋರಾಟಗಾರರೊಂದಿಗೆ, ಈ ಗುಂಪು ದೇಶಾದ್ಯಂತ ಅನೇಕ ಜಿಲ್ಲೆಗಳನ್ನು ನಿಯಂತ್ರಿಸುತಿದ್ದು, ಕಾಬೂಲ್ ಮತ್ತು ಅಫಘಾನ್ ಭದ್ರತಾ ನೆಲೆಗಳ ಮೇಲೆ ದಾಳಿಗಳನ್ನು ಮುಂದುವರೆಸಿದೆ.

ಆದಾಗ್ಯೂ, ತಾಲಿಬಾನ್ ಮತ್ತು ಇತರ ಗುಂಪುಗಳ ವಿವಿಧ ಬಣಗಳು ಶಾಂತಿ ಮಾತುಕತೆಗಳಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಿಲ್ಲವಾದ್ದರಿಂದ,  ಅಮೆರಿಕ ಸೈನ್ಯದ ಮೇಲೆ ಆಕ್ರಮಣವನ್ನು ಮುಂದುವರಿಸುವ ಸಾದ್ಯತೆಯಿದ್ದು, ಇದು ಶಾಂತಿ ಒಪ್ಪಂದವನ್ನು ದುರ್ಬಲಗೊಳಿಸಬಹುದಾಗಿದೆ. ಕಾಬೂಲ್ ಸರ್ಕಾರವು 5,000 ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವವರೆಗೆ,  ಅಫ್ಘಾನ್ ಸರ್ಕಾರದೊಂದಿಗೆ ಯಾವುದೇ ಮಾತುಕತೆಗಳನ್ನು ತಾಲಿಬಾನ್ ಈಗಾಗಲೇ ತಿರಸ್ಕರಿಸಿದೆ. ಆದರೆ ಅಧ್ಯಕ್ಷ ಘಾನಿಯ ಸರ್ಕಾರವು ತನ್ನ ಮಾರಕ ಶತ್ರುಗಳಿಗೆ ಸಾವಿರಾರು ಬಲವರ್ಧನೆಗಳನ್ನು ಮರಳಿ ನೀಡಲು ಹಿಂಜರಿಯುತ್ತಿರುವುದು ಸಹಜ. ತಾಲಿಬಾನಿನ    ಸಂಭವನೀಯ ಹೊಸ ಆಜ್ಞಾನುಸಾರ, ಅಫ್ಘಾನಿಸ್ತಾನದಾದ್ಯಂತ ಸರಣಿ ದಾಳಿಗಳು ಮತ್ತು ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಇರುವ ಭಿನ್ನಾಭಿಪ್ರಾಯವು ಶಾಂತಿ ಪ್ರಕ್ರಿಯೆಯನ್ನು ಹಳಿ ತಪ್ಪಿಸುವ ಆತಂಕವಿದೆ.

ತಾಲಿಬಾನಿಗೆ   ನೆರವು ನೀಡಿದ ಮತ್ತು ಮಾತುಕತೆಗಳಲ್ಲಿ ಅಮೆರಿಕಾಗೆ  ಸಹಾಯ ಮಾಡಿದ ಪಾಕಿಸ್ತಾನವು ಒಪ್ಪಂದವನ್ನು ಬಹಿರಂಗವಾಗಿ ಸ್ವಾಗತಿಸಿದೆಯಾದರೂ,  ಇಸ್ಲಾಮಾಬಾದಿಗೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ನ ಬೂದು ಪಟ್ಟಿಯಿಂದ ಹೊರಬರಲು ಅಮೆರಿಕ ಸಹಾಯ ಮಾಡುವವರೆಗೂ ಮಾತುಕತೆ ಯಶಸ್ವಿಯಾಗಲು ಪಾಕಿಸ್ತಾನ ಅನುಮತಿಸುವುದಿಲ್ಲ. ಭವಿಷ್ಯದ ಮಾತುಕತೆಗಳ ತಾಣದ  ಘೋಷಣೆಯಾಗಿಲ್ಲದಿದ್ದರೂ, ಜರ್ಮನಿ ಮತ್ತು ನಾರ್ವೆ ಮಾತುಕತೆಗಳನ್ನು ಆಯೋಜಿಸಲು ಮುಂದಾಗಿವೆ. ಅಂತಿಮವಾಗಿ ಹೇಳುವುದಾದರೆ, ‘ಶಾಂತಿ ಒಪ್ಪಂದ’ ಇನ್ನೂ ಗಟ್ಟಿ ಒಪ್ಪಂದವಲ್ಲ. ಅಫ್ಘಾನಿಸ್ತಾನದ ವಿಶ್ವಾಸಘಾತುಕ ರಾಜಕೀಯ ಮತ್ತು ಭದ್ರತಾ ಭೂದೃಶ್ಯವನ್ನು ಗಮನಿಸಿದರೆ, ಯುದ್ಧಭೂಮಿಯಲ್ಲಿ ಮತ್ತು ಸಮಾಲೋಚನಾ ಮೇಜಿನ ಮೇಲೆ ಬಹಳಷ್ಟು  ನಡೆಯುವ ಸಂಭವವಿದೆ.

ಅಫ್ಘಾನಿಸ್ತಾನದ ಬಲವಾದ ಬೆಂಬಲಿಗ ಭಾರತವಾಗಿದ್ದು, 2001ರಿಂದ ದೇಶದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ವ್ಯಾಪಾರವನ್ನು ಬೆಳೆಸಲು                  3 ಬಿಲಿಯನಷ್ಟು ಹಣದ ನೆರವಿಗೆ ಬದ್ಧವಾಗಿದೆ. ಯುದ್ಧದಿಂದ ಹಾನಿಗೊಳಗಾದ ದೇಶದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಪುನರ್ನಿರ್ಮಿಸುವಲ್ಲಿ ನವದೆಹಲಿ ತೊಡಗಿಸಿಕೊಂಡಿದೆ. ಪಾಕಿಸ್ತಾನದ ಪ್ರಭಾವವನ್ನು ಕಡಿಮೆ ಮಾಡುವುದು ಮತ್ತು ಅಫ್ಘಾನಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗುವುದನ್ನು ತಡೆಯುವುದು ನವದೆಹಲಿಯ ಮುಖ್ಯ ಗುರಿಯಾಗಿದೆ.

ತಾಲಿಬಾನ್ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ. ನ್ಯಾಯಬದ್ದವಾಗಿ ರಾಜಕೀಯ ಘಟಕವಾಗಿ ಅದನ್ನು ಗುರುತಿಸಲು  ಭಾರತದ ಒಪ್ಪಿಗೆಯಿಲ್ಲ. ಸುಸ್ಥಿರ ಶಾಂತಿಗೆ ಕಾರಣವಾಗುವ ಅಫಘಾನ್ ನೇತೃತ್ವದ ಮತ್ತು ಅಫಘಾನ್ ಒಡೆತನದ ಶಾಂತಿ ಮತ್ತು ಸಾಮರಸ್ಯ ಪ್ರಕ್ರಿಯೆಯನ್ನು ಭಾರತ ಬೆಂಬಲಿಸುತ್ತದೆ. ಭಾರತವು ಸಂಘಟಿತ, ಸಾರ್ವಭೌಮ, ಪ್ರಜಾಪ್ರಭುತ್ವ, ಒಳಗೊಂಡ,  ಸ್ಥಿರ ಮತ್ತು ಸಮೃದ್ಧ ಅಫ್ಘಾನಿಸ್ತಾನವನ್ನು ಬಯಸುತ್ತದೆ. 2001ರಿಂದ ದೇಶವು ಸಾಧಿಸಿರುವ ಸಾಧನೆಗಳನ್ನು ಕಾಪಾಡಿಕೊಳ್ಳಲು ಅಂತಾರಾಷ್ಟ್ರೀಯ ಸಮುದಾಯವು ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಿದರೆ ಮಾತ್ರ ಸುಸ್ಥಿರ ಶಾಂತಿಯನ್ನು ಸಾಧಿಸಬಹುದು.

ಲೇಖನ: ಡಾ. ಸ್ಮಿತಾ, ಅಫ್-ಪಾಕ್ ವ್ಯವಹಾರಗಳ ಕಾರ್ಯತಂತ್ರದ ವಿಶ್ಲೇಷಕಿ