ಯುರೋಪಿನ ಗಡಿಗಳನ್ನು ಟರ್ಕಿ ತೆರೆಯುವಿಕೆ – ಸಿರಿಯ ನಿರಾಶ್ರಿತರ ಬಿಕ್ಕಟ್ಟಿನ ಉಲ್ಬಣ

ಅನೇಕ ಜೀವಹಾನಿಯಾದ  ಮತ್ತು ಯೂರೋಪ್ ಒಕ್ಕೂಟ  (EU) ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದ 2015ರ ವಲಸೆ ಬಿಕ್ಕಟ್ಟಿನ ನೆನಪುಗಳು   ಟರ್ಕಿಯ ಇತ್ತೀಚಿನ ಕ್ರಮಗಳೊಂದಿಗೆ ಪುನರಾವರ್ತನೆಯಾಗುವಂತೆ ಕಾಣುತ್ತದೆ. ಕಳೆದ ವಾರ, ನಿರಾಶ್ರಿತರಿಗಾಗಿ ಯುರೋಪಿನತ್ತ  ತನ್ನ ಗಡಿಯನ್ನು ಅಂಕಾರಾ ತೆರೆಯಿತು. ಟರ್ಕಿಯ ಕ್ರಮವನ್ನು, EU ಜೊತೆಗಿನ 2015-2016ರ ವಲಸೆ ಬಿಕ್ಕಟ್ಟನ್ನು ತಡೆಹಿಡಿದ  ಟರ್ಕಿಯ ನಿರಾಶ್ರಿತರ ಒಪ್ಪಂದದ ಉಲ್ಲಂಘನೆ ಎಂದು ಯುರೋಪಿನ ರಾಷ್ಟ್ರಗಳು ಪರಿಗಣಿಸುತ್ತವೆ. ಆದಾಗ್ಯೂ, ನೀಡಿದ್ದ ಭರವಸೆಗಳಿಗೆ EU ಬದ್ಧವಾಗಿಲ್ಲವಾದ್ದರಿಂದ ಹಾಗೂ ತನ್ನ ನಿರಾಶ್ರಿತರ ಪ್ರಮಾಣವನ್ನು ಟರ್ಕಿ ತಲುಪಿರುವುದರಿಂದ,  ಯುರೋಪಿನ ದ್ವಾರವನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಟರ್ಕಿಯು ಹೇಳಿದೆ. ಆರು ಬಿಲಿಯನ್ ಡಾಲರ್ ಭರವಸೆಯ ಸಹಾಯವನ್ನು EU ಬಿಡುಗಡೆ ಮಾಡಿಲ್ಲದಿರುವುದು, ಟರ್ಕಿಯೊಂದಿಗೆ ವ್ಯಾಪಾರವನ್ನು ಹೆಚ್ಚಿಸಿಲ್ಲದಿರುವುದು, EUಗೆ ಟರ್ಕಿಯ ಪ್ರವೇಶ ಅಥವಾ ಟರ್ಕಿಯ ನಾಗರಿಕರಿಗಾಗಿ EU ಸದಸ್ಯ ರಾಷ್ಟ್ರಗಳಿಗೆ ವೀಸಾ ರಹಿತ ಪ್ರಯಾಣದ ಕುರಿತು ತ್ವರಿತ ಮಾತುಕತೆ ಮಾಡಿಲ್ಲದಿರುವುದು – ಈ  ವಿಷಯಗಳ ಬಗ್ಗೆ ಅಂಕಾರಾ ಆರೋಪಿಸಿದೆ. ಈ ಆರೋಪಗಳನ್ನು EU ನಿರಾಕರಿಸಿದೆ. ವಾಸ್ತವವಾಗಿ, ಟರ್ಕಿಗೆ ನೀಡಬೇಕಿದ್ದ ಸಹಾಯವನ್ನು ಪೂರ್ಣವಾಗಿ ಪಾವತಿಸಲಾಗಿದೆ ಎಂದು ಯುರೋಪಿಯನ್ ಕಮಿಷನ್ ಹೇಳುತ್ತದೆಯಾದರೂ, ಅದನ್ನು ನೇರವಾಗಿ ಟರ್ಕಿ ಸರ್ಕಾರಕ್ಕೆ ನೀಡದೆ, ನಿರಾಶ್ರಿತರ ನೆರವು ಸಂಸ್ಥೆಗಳಿಗೆ ನೇರವಾಗಿ ನೀಡಿದೆ .

ಸದಸ್ಯತ್ವ ಕುರಿತು EUವು  ಮಾತುಕತೆ ನಡೆಸಿಲ್ಲದರ ಬಗ್ಗೆ, 2016ರ ದಂಗೆಯ ನಂತರ ಟರ್ಕಿಯ ಅಧ್ಯಕ್ಷ ರಿಸೀಪ್ ತಯ್ಯಿಪ್ ಎರ್ಡೊಗನ್ ಕೈಗೊಂಡ ಕೆಲವು ಕಠಿಣ ಕ್ರಮಗಳ ಹಿನ್ನೆಲೆಯಲ್ಲಿ ಟರ್ಕಿಯ ಆರೋಪವನ್ನು ನೋಡಬೇಕಾಗಿದೆ. ಟರ್ಕಿ ಸರ್ಕಾರವು ತನ್ನನ್ನು ದೂಷಿಸಿದ  ಪತ್ರಕರ್ತರು ಮತ್ತು ವಿಮರ್ಶಕರ ಮೇಲೆ ನಿರ್ದಯವಾಗಿ ವ್ಯವಹರಿಸಿದೆ. ಅಪಾರ ಸಂಖ್ಯೆಯ ಜರ್ಮನ್ ನಾಗರಿಕರು ಟರ್ಕಿಯ ಜೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ. ಜಾಗತಿಕ ವ್ಯಾಪಾರ ಒಟ್ಟಾರೆ ದುರ್ಬಲವಾಗಿರುವುದು, ಯುರೋಪ್ ಮತ್ತು ಟರ್ಕಿ ನಡುವಿನ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಯುರೋಪಿನೊಳಗಿನ ಬಲಪಂಥೀಯ ಸಂಪ್ರದಾಯವಾದಿ ರಾಜಕಾರಣದ (ವಲಸೆ-ವಿರೋಧಿ ಪಕ್ಷಗಳನ್ನು ಒಳಗೊಂಡಂತೆ) ಉನ್ನತಿ,  ಟರ್ಕಿಯ ಬಲವಾದ ಮೂಲಭೂತವಾದಿ ಒಲವು ಮತ್ತು ಯುರೋಪಿನಲ್ಲಿ ಜಾಗತೀಕರಣದ ಹಿನ್ನಡೆಗಳು ಅಹಿತಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಯುರೋಪಿನಲ್ಲಿ ನ್ಯಾಟೋ ಮಿತ್ರ ರಾಷ್ಟ್ರವಾದ ಟರ್ಕಿ ಒಳಗೊಂಡಂತೆ ಅನ್ಯದೇಶೀಯರ ದ್ವೇಷ ಮತ್ತು ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗಿದೆ. 

2015ರ ವಲಸೆ ಬಿಕ್ಕಟ್ಟಿನಿಂದ ಯುರೋಪ್ ಇನ್ನೂ ಚೇತರಿಸಿಕೊಳ್ಳುತ್ತಿದೆ.  ಆದಾಗ್ಯೂ,. ವಲಸೆ ದೃಷ್ಟಿಕೋನದಿಂದ ಯುರೋಪ್‌ಗೆ ಆಗುವ ದುಷ್ಪರಿಣಾಮಗಳಿಂದಾಗಿ, EU ಮತ್ತು NATO ಸದಸ್ಯ ರಾಷ್ಟ್ರಗಳು ಟರ್ಕಿಯನ್ನು ಟ್ರಾನ್ಸ್-ಅಟ್ಲಾಂಟಿಕ್ ಭದ್ರತಾ ವಾಸ್ತುಶಿಲ್ಪದ ಕಕ್ಷೆಯಿಂದ ದೂರ ತಳ್ಳಲು ಬಯಸುವುದಿಲ್ಲ. 

ಸಿರಿಯಾದ 3.6 ದಶಲಕ್ಷ  ನಿರಾಶ್ರಿತರನ್ನು ಸ್ವೀಕರಿಸಿದ ಜೋರ್ಡಾನ್  ನಂತರ ಟರ್ಕಿ ಅತಿದೊಡ್ಡ ದೇಶವಾಗಿದೆ ಎಂಬುದು ನಿರಾಕರಿಸಲಾಗದ ಸತ್ಯ. ಆದಾಗ್ಯೂ, ಇನ್ನೂ  ಹೆಚ್ಚಿನ ನಿರಾಶ್ರಿತರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಂಕಾರಾ ಹೇಳಿದೆ. ಟರ್ಕಿ ಆಂತರಿಕ  ಪರಿಸ್ಥಿತಿ ದುರ್ಬಲವಾಗಿದೆ. ದೇಶದ ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿದೆ. ಹೆಚ್ಚಿನ ಹಣದುಬ್ಬರ, ನಿರುದ್ಯೋಗ ಮತ್ತು ನಿರಾಶ್ರಿತರ ವಿರುದ್ಧ ಹಿಂಸಾಚಾರ ಸ್ಥಿತಿಯಿದೆ. ಸಿರಿಯ ನಿರಾಶ್ರಿತರು ಹೆಚ್ಚಾಗುತ್ತಿದ್ದಂತೆ, ಟರ್ಕಿಯಲ್ಲಿನ ದೇಶೀಯ ಪರಿಸ್ಥಿತಿ ಇನ್ನಷ್ಟು ಜಟಿಲವಾಗಬಹುದು.

ಸಿರಿಯಾದ ಇಡ್ಲಿಬ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅನೇಕ ಸಿರಿಯಾದ  ನಿರಾಶ್ರಿತರು ಟರ್ಕಿಯಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 2019ರ ಪುನರ್ವಸತಿ ಯೋಜನೆಯಡಿ ಟರ್ಕಿ ಸರ್ಕಾರವು ಈ ನಿರಾಶ್ರಿತರನ್ನು ಬಲವಂತವಾಗಿ ಗಡೀಪಾರು ಮಾಡಿದೆ. ಹೆಚ್ಚಿನ ನಿರಾಶ್ರಿತರು ಎಂದರೆ ದೇಶದೊಳಗೆ ಶಾಂತಿ ಮತ್ತು ಸ್ಥಿರತೆಯ  ಹಳಿ ತಪ್ಪಿವಂತಾಗುತ್ತದೆ.

ಸಿರಿಯಾದ  ಕುರ್ಡ್ಸ್ ಮತ್ತು ಸಿರಿಯಾದ ಸರ್ಕಾರವನ್ನು ಸೋಲಿಸಲು ಹಾಗೂ ಟರ್ಕಿಗೆ ಭದ್ರತೆ ಒದಗಿಸಲು ಯುರೋಪಿನ ಸಹಾಯವನ್ನು ಅಂಕಾರಾ ಬಯಸುತ್ತದೆ. ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ಗೆ ನಿಷ್ಠರಾಗಿರುವ ಸಿರಿಯ ಪಡೆಗಳು ಇಡ್ಲಿಬ್‌ನಲ್ಲಿ ಟರ್ಕಿಯ  ಪಡೆಗಳನ್ನು ಹಣ್ಣುಮಾಡುತ್ತಿವೆ. ಶ್ರೀ ಎರ್ಡೊಗನ್ ಸಿರಿಯಾದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಲು ಬಯಸಿದ್ದರು, ಆದರೆ ಅದು ಇಲ್ಲಿಯವರೆಗೆ ಮರೀಚಿಕೆಯಾಗಿದೆ. ಅರಬ್ ಜಗತ್ತಿನಲ್ಲಿ ಮತ್ತು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅಂಕಾರಾದ  ಭದ್ರತೆ ಮತ್ತು ಖ್ಯಾತಿ ಈಗ ಸೂಕ್ಷ್ಮ ಸ್ಥಿತಿ ಯಲ್ಲಿದೆ. ಟರ್ಕಿ ಅಧ್ಯಕ್ಷರು ತಮ್ಮ ದೇಶದೊಳಗೆ ಮತ್ತು ಅರಬ್ ಜಗತ್ತಿನಲ್ಲಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುವ ಸ್ಥಿತಿಯೇರ್ಪಟ್ಟಿದೆ. ಇಡ್ಲಿಬ್‌ನ ಪರಿಸ್ಥಿತಿ ಕುರಿತು ಅವರು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಿದ್ದಾರೆ.

ಇಡ್ಲಿಬ್‌ನಲ್ಲಿ ಹಿಂಸಾಚಾರ ಮುಂದುವರೆದಂತೆ, ಒಂದು ದಶಲಕ್ಷ ಸಿರಿಯ ನಿರಾಶ್ರಿತರು ಇಡ್ಲಿಬ್‌ನಿಂದ ಪರಾರಿಯಾಗಿದ್ದಾರೆ. ಯುರೋಪ್ ಮತ್ತು ಟರ್ಕಿ ಎರಡಕ್ಕೂ ಹೆಚ್ಚಿನ ಸಮಸ್ಯೆಗಳನ್ನು ಇತ್ತೀಚಿನ ನಿರಾಶ್ರಿತರ ಬಿಕ್ಕಟ್ಟು ಸೃಷ್ಟಿಸಬಹುದು. ಆದ್ದರಿಂದ, ಕೆಲವು ಅನುಕೂಲಗಳನ್ನು ಪಡೆಯಲು ಯುರೋಪಿನ ಮೇಲೆ ಒತ್ತಡ ಹೇರಲು ಟರ್ಕಿ  ಪ್ರಯತ್ನಿಸುತ್ತಿದೆ. ಶ್ರೀ ಎರ್ಡೊಗನ್ ಅವರಿಗೆ ಆಂತರಿಕವಾಗಿ ಇದು ಒಳಿತು ಮಾಡುತ್ತದೆ. ಬಾಲ್ಕನ್ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರ ಪ್ರವಾಹದ ಒಳಹರಿವನ್ನು ತಡೆಯಲು, 2015-16ರಲ್ಲಿ ಮಾಡಿದಂತೆ, ಅಂಕರಾಗೆ ಈಗಲೂ ಸಾಧ್ಯವೆಂದು EU ನಂಬುತ್ತದೆ.

ವಾಯುವ್ಯ ಸಿರಿಯಾದಲ್ಲಿ ಟರ್ಕಿಯ ಏಕಪಕ್ಷೀಯ ಮಿಲಿಟರಿ ಕ್ರಮವನ್ನು ಭಾರತವು   ಟೀಕಿಸಿ, ಟರ್ಕಿಯ ಕ್ರಮವು ಈ ಪ್ರದೇಶದ ಸ್ಥಿರತೆಯನ್ನು ಹಾಳುಮಾಡಿ, ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ. ಟರ್ಕಿ ಮತ್ತು EU ನಡುವಿನ ಶಕ್ತಿಯ ಆಟವು,  ದುರಂತದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇಡ್ಲಿಬ್‌ನ ದಶಲಕ್ಷಕ್ಕೂ ಹೆಚ್ಚಿನ ಸಿರಿಯನ್ ನಿರಾಶ್ರಿತರ ಭವಿಷ್ಯವನ್ನು ಅಪಾಯಕ್ಕೆ ತರುವುದಿಲ್ಲ ಎಂದು ನವದೆಹಲಿ ಆಶಿಸುತ್ತದೆ.

 

ಲೇಖನ : ಡಾ. ಇಂದ್ರಾಣಿ  ತಾಲುಕ್ದರ್, ರಷ್ಯಾ, ಸಿಐಎಸ್ ಮತ್ತು ಟರ್ಕಿಯ ಕಾರ್ಯತಂತ್ರದ ವಿಶ್ಲೇಷಕಿ