ಇಸ್ರೇಲಿ ಸ್ಥಗಿತವನ್ನು ಪರಿಹರಿಸಲು KNESSET ಚುನಾವಣೆಗಳ ವಿಫಲತೆ

ಮಾರ್ಚ್ 2ರಂದು 23ನೇ ನೆಸ್ಸೆಟ್ಗೆ  ಇಸ್ರೇಲ್ ಚುನಾವಣೆ ನಡೆಸಿತು. ಒಂದು ವರ್ಷದೊಳಗಿನ ಮೂರನೇ ಸಂಸತ್ತಿನ ಚುನಾವಣೆಗಳಿಂದ  ಅನೇಕ ಇಸ್ರೇಲಿಗಳು ಆಶಿಸುತ್ತಿದ್ದ ಫಲ ದೊರಕಿಲ್ಲ (Manna from heaven ಎಂದು ಸಾಬೀತಾಗಲಿಲ್ಲ). ಮತದಾನ ಮುಗಿದ ಕೆಲವೇ ಗಂಟೆಗಳ ಒಳಗೆ ಜಯ ತನಗೆ ಎಂದು ಹೇಳಿಕೊಂಡಿದ್ದರೂ, ಇಸ್ರೇಲ್‌ನ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ  ಪ್ರಧಾನ ಮಂತ್ರಿ ಲಿಕುಡ್ ನಾಯಕ ಬೆಂಜಮಿನ್ ನೆತನ್ಯಾಹು 120 ಸದಸ್ಯರ ಸಂಸತ್ತಿನಲ್ಲಿ (ನೆಸ್ಸೆಟ್), 61ರ ಮ್ಯಾಜಿಕ್ ಸಂಖ್ಯೆಯಿಂದ ದೂರವೇ ಉಳಿದರು.

ಆರು ದಶಲಕ್ಷಕ್ಕೂ ಹೆಚ್ಚಿನ ಮತಗಳಲ್ಲಿ ಸುಮಾರು ಶೇಕಡಾ 99 ಎಣಿಕೆಯೊಂದಿಗೆ, ಲಿಕುಡ್ 36 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿ  ಹೊರಹೊಮ್ಮಿದರೆ, ಶಾಸ್ ಮತ್ತು ಯುನೈಟೆಡ್ ಟೋರಾ ಜುದಾಯಿಸಂ ಒಳಗೊಂಡ ಧಾರ್ಮಿಕ ಗುಂಪು ಕ್ರಮವಾಗಿ ಒಂಬತ್ತು ಮತ್ತು ಏಳು ಸ್ಥಾನಗಳನ್ನು ಪಡೆದುಕೊಂಡಿವೆ. ಬಲಪಂಥೀಯ ಯಮಿನಾಗೆ ಆರು ಸ್ಥಾನಗಳು ಸಿಕ್ಕಿವೆ. ನೇತನ್ಯಾಹು ನೇತೃತ್ವದ ಬಲ-ಧಾರ್ಮಿಕ ಬಣವು 58 ಸ್ಥಾನಗಳನ್ನುಗಳಿಸಿ, ಸರಳ ಬಹುಮತಕ್ಕೆ   ಮೂರು ಸ್ಥಾನಗಳ ಕೊರತೆ ಎದುರಿಸಿದೆ. ಎಲ್ಲಾ ಮತಗಳನ್ನು ಎಣಿಸಿದ ನಂತರ ಅಂತಿಮ ಸಂಖ್ಯೆ ಬದಲಾಗಬಹುದಾದರೂ, ನೆತನ್ಯಾಹು ಅವರು ಸರಳ ಬಹುಮತ ಪಡೆಯುವುದು ಅಸಂಭವವಾಗಿದೆ. ಲಿಕುಡ್ ನಿರೀಕ್ಷಿಸಿದ್ದ ಭರ್ಜರಿ ಗೆಲುವು ಸಾಧಿಸಲು ಆರ್ಥಿಕ ಬೆಳವಣಿಗೆ ಮತ್ತು ಅಮೆರಿಕ ಜೊತೆಗಿನ ನಿಕಟ ಸಂಬಂಧಗಳು ಸಾಲದಾಯಿತೆಂದು   ಸಾಬೀತಾಗಿದೆ .

ಲೆಕ್ಕದ ಪ್ರಕಾರ 62 ಸ್ಥಾನಗಳನ್ನು ಹೊಂದಿರುವ ಪ್ರತಿಪಕ್ಷಗಳಿಗೂ  ಸಹ ಸರ್ಕಾರ ರಚಿಸುವ ಸಾಧ್ಯತೆಯೂ ಇಲ್ಲ. ಮಾಜಿ ಜನರಲ್ ಬೆನ್ನಿ ಗ್ಯಾಂಟ್ಜ್ ನೇತೃತ್ವದ ಸೆಂಟ್ರಿಸ್ಟ್ ಬ್ಲೂ ಮತ್ತು ವೈಟ್ ಪಕ್ಷವು, ಚುನಾವಣಾ ಪೂರ್ವದ ಭರವಸೆ  ಸುಳ್ಳಾಗಿ, 33 ಸ್ಥಾನಗಳನ್ನು ಗಳಿಸಿದರೆ, ಎಡಪಂಥೀಯ ಲೇಬರ್-ಗೆಷರ್-ಮೆರೆಟ್ಜ್ ಬಣವು ಏಳು ಸ್ಥಾನಗಳನ್ನು ಪಡೆದುಕೊಂಡಿದೆ. ಚುನಾವಣೆಯಲ್ಲಿ ನಿಜವಾದ ವಿಜೇತ ಎಂದರೆ,  15 ಸ್ಥಾನಗಳನ್ನು ಪಡೆದ ಜಾಯಿಂಟ್ ಲಿಸ್ಟ್ ಆಗಿದ್ದು, 1948ರ ನಂತರ ಇಸ್ರೇಲಿ ಅರಬ್ಬರಿಗೆ ಇದು ಅತ್ಯಧಿಕ ಪ್ರಾತಿನಿಧ್ಯವಾಗಿದೆ.

ಆದಾಗ್ಯೂ, ಏಳು ಸ್ಥಾನಗಳೊಂದಿಗೆ, ಅವಿಗ್ಡೋರ್ ಲಿಬರ್ಮನ್ ನೇತೃತ್ವದ ಇಸ್ರೇಲ್ ಬೀಟೈನು ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ. ಮುಂದಿನ ಸರ್ಕಾರವನ್ನು ರಚಿಸಲು ನೆತನ್ಯಾಹು ಮತ್ತು ಗ್ಯಾಂಟ್ಜ್‌ಗೆ ಅವರ ಬೆಂಬಲ ಅತ್ಯಗತ್ಯ.  ಆದರೆ, ಇದು ಸುಲಭಸಾಧ್ಯವಲ್ಲ. ಅರಬ್ ಪಕ್ಷಗಳನ್ನು ಒಳಗೊಂಡಿರುವ ಯಾವುದೇ ಸರ್ಕಾರವನ್ನು ಲೈಬರ್‌ಮ್ಯಾನ್ ವಿರೋಧಿಸಿದ್ದಾರೆ. ಶ್ರೀ ನೆತನ್ಯಾಹು ಮತ್ತು ಶ್ರೀ ಲೈಬರ್‌ಮ್ಯಾನ್ ನಡುವಿನ ಭಿನ್ನಾಭಿಪ್ರಾಯಗಳು ಡಿಸೆಂಬರ್ 2018ರಲ್ಲಿ ಕ್ನೆಸೆಟ್ ವಿಸರ್ಜನೆಗೆ ಕಾರಣವಾಯಿತು. ಇದರ ಪರಿಣಾಮವಾಗಿ,    ಮೂರು ಅನಿರ್ದಿಷ್ಟ ಚುನಾವಣೆಗಳು, ಏಪ್ರಿಲ್ ಮತ್ತು ಸೆಪ್ಟೆಂಬರ್ 2019ರಲ್ಲಿ ಮತ್ತು ಮೂರನೆಯದು ಈ ತಿಂಗಳಿನಲ್ಲಿ, ನಡೆದವು. 

ಇಸ್ರೇಲ್ ಇತಿಹಾಸದಲ್ಲಿ ಅತಿ ದೀರ್ಗಾವಧಿಯ ಉಸ್ತುವಾರಿ ಸರ್ಕಾರದ ಮುಖ್ಯಸ್ಥರಾಗಿರುವ ನೆತನ್ಯಾಹು ಈಗಾಗಲೇ ತಮ್ಮ ಮಿತ್ರರಾಷ್ಟ್ರಗಳೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದು, ಸರ್ಕಾರ ರಚನೆಯ  ಔಪಚಾರಿಕ ಪ್ರಕ್ರಿಯೆಯು ಮುಂದಿನ ವಾರದ ಆದಿಯಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಫಲಿತಾಂಶಗಳನ್ನು ಅಧ್ಯಕ್ಷ ರಿವೇನ್ ರಿವ್ಲಿನ್‌ಗೆ ಔಪಚಾರಿಕವಾಗಿ ತಿಳಿಸಿದ ನಂತರ, ಇಸ್ರೇಲಿ ಅಧ್ಯಕ್ಷರು ಎಲ್ಲಾ ರಾಜಕೀಯ ಪಕ್ಷಗಳ ಜೊತೆಗೆ  ಸಮಾಲೋಚಿಸಿ ಸ್ಥಿರ ಸರ್ಕಾರವನ್ನು ಯಾರು ರಚಿಸಬಹುದು ಎಂಬುದರ ಕುರಿತು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಚುನಾವಣೆಯ ನಂತರ, ಸಾಮಾನ್ಯವಾಗಿ ಸರ್ಕಾರದ ರಚನೆಯು ಕನಿಷ್ಠ ನಾಲ್ಕು ವಾರಗಳನ್ನು ತೆಗೆದುಕೊಳ್ಳುತ್ತದೆ. ಈ ಸಲವೂ,  ವಿಶೇಷವಾಗಿ ಅನಿಶ್ಚಿತ ತೀರ್ಪಿನ ಹಿನ್ನೋಟದಲ್ಲಿ, ಯಾವ ವ್ಯತ್ಯಾಸದ ಸಾಧ್ಯತೆ ಕಡಿಮೆ.

ಕಳೆದ ವರ್ಷ ನಡೆದ ಎರಡು ಚುನಾವಣೆಗಳ ನಂತರ ಯಾವುದೇ ಸರ್ಕಾರಗಳು ರಚನೆಯಾಗದಿರುವುದಕ್ಕೆ  ಲಿಕುಡ್ ನಾಯಕನನ್ನು ಅನುಮೋದಿಸಲು ಲೈಬರ್‌ಮ್ಯಾನ್ ನಿರಾಕರಿಸಿದ್ದೇ ಸರಿಸುಮಾರು ಕಾರಣ. ಲೈಬರ್‌ಮ್ಯಾನ್ ತನ್ನ ನಿಲುವನ್ನು ಬದಲಾಯಿಸದಿದ್ದರೆ, ನೆತನ್ಯಾಹು ಅವರ ಸರ್ಕಾರ ರಚನೆಯು ಬ್ಲೂ ಅಂಡ್ ವೈಟ್ ಪಕ್ಷದಿಂದ ಪಕ್ಷಾಂತರ  ಕಾರ್ಯತಂತ್ರದ ಮೇಲೆ ನಿಂತಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ಸೂಚನೆಗಳಿವೆ.

ಮಾರ್ಚ್ 17ರಂದು, ಶ್ರೀ ನೆತನ್ಯಾಹು ಅವರು ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರಾದ ಮೊದಲ ಇಸ್ರೇಲಿ ಪ್ರಧಾನ ಮಂತ್ರಿಯಾಗಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ, ಪ್ರಧಾನಿ ಹುದ್ದೆಯಲ್ಲಿ ಇರುವವರನ್ನು ವಿಚಾರಣೆಗೆ ಒಳಪಡಿಸುವುದನ್ನು ತಡೆಯುವ ಕಾನೂನನ್ನು ತರುವಲ್ಲಿ ನೆತನ್ಯಾಹು ವಿಫಲರಾಗಿದ್ದಾರೆ. ದೋಷಾರೋಪಿತ  ಅಧಿಕಾರಿಗಳು ಪ್ರಧಾನಿಯಾಗಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸುವ ಮಸೂದೆಯನ್ನು ಉತ್ತೇಜಿಸಲು ಬ್ಲೂ & ವೈಟ್ ಪಕ್ಷ ಯೋಜಿಸಿದೆ.

ಯೂನಿಟಿ ಸರ್ಕಾರವು ಆಕರ್ಷಕ ಆಯ್ಕೆಯಾಗಿದ್ದರೂ, ಲಿಕುಡ್ ತನ್ನ ನಾಯಕನನ್ನು ಬದಲಾಯಿಸುವಂತೆ ಬ್ಲೂ ಅಂಡ್ ವೈಟ್ ಒತ್ತಾಯಿಸುತ್ತಿದೆ. ಇದು ನೆತನ್ಯಾಹುಗೆ ಮಾತ್ರವಲ್ಲದೆ ಪಕ್ಷದ ಬಹುಸಂಖ್ಯಾತರಿಗೂ ಸ್ವೀಕಾರಾರ್ಹವಲ್ಲ.  ಏಕೆಂದರೆ ಹೊಸ ನಾಯಕನ ಆಯ್ಕೆಯು ಅನಿರೀಕ್ಷಿತ ಸವಾಲುಗಳನ್ನು ಉಂಟುಮಾಡುವುದಲ್ಲದೆ, ಪಕ್ಷದ ಶಕ್ತಿಯನ್ನು ಕುಗ್ಗಿಸುತ್ತದೆ.

ಇಸ್ರೇಲಿನ  ರಾಜಕೀಯ ಅನಿಶ್ಚಿತತೆಯು ಅದರೊಂದಿಗಿನ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ. ಇಸ್ರೇಲ್ ಹೊಸ ನಾಯಕನನ್ನು ಆಯ್ಕೆ ಮಾಡಿದರೂ, ಸಂಬಂಧಗಳು ಬದಲಾಗುವ ಸಾಧ್ಯತೆ ಕಡಿಮೆ. ಭಾರತ-ಇಸ್ರೇಲ್ ಸಂಬಂಧಗಳನ್ನು ಕಾರ್ಯತಂತ್ರದ ಸಹಭಾಗಿತ್ವಕ್ಕೆ ಏರಿಸಲಾಗಿದೆ. ರಕ್ಷಣೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ರಂಗಗಳಲ್ಲಿ ಉಭಯ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ರಾಜಕೀಯದ  ಏನೇ ಬೆಳೆವಣಿಗೆಯು ಬಲವಾದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ.

 

ಲೇಖನ: ಪ್ರೊ. ಪಿ ಆರ್ ಕುಮಾರಸ್ವಾಮಿ, ಪಶ್ಚಿಮ ಏಷ್ಯನ್ ಅಧ್ಯಯನ ಕೇಂದ್ರ, ಜೆಎನ್‌ಯು