ಸಂಸತ್ತಿನಲ್ಲಿ ಈ ವಾರ

ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 2ರಂದು ಪ್ರಾರಂಭವಾಗಿದ್ದು,  ಏಪ್ರಿಲ್ 3ರವರೆಗೆ ಮುಂದುವರಿಯುತ್ತದೆ. ವಿರೋಧ ಪಕ್ಷಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರವನ್ನು ಆರ್ಥಿಕ ಸ್ಥಿತಿ ಮತ್ತು ಕೃಷಿ ಸಮಸ್ಯೆಗಳ ವಿಷಯದಲ್ಲಿ ತರಾಟೆ ತೆಗೆದುಕೊಳ್ಳಲು  ಪ್ರಯತ್ನಿಸುತ್ತ್ತಿವೆ; ಆಡಳಿತ ಪಕ್ಷವು ಉಭಯ ಸದನಗಳ ಮುಂದೆ ಸತ್ಯ ಮತ್ತು ಅಂಕಿ ಅಂಶಗಳನ್ನು ಇರಿಸಲು ನಿರ್ಧರಿಸಿದೆ. ಕಾರ್ಮಿಕ ಸುಧಾರಣೆಗಳು ಮತ್ತು ಸರೊಗಸಿ (Surrogacy) ನಿಯಂತ್ರಣ ಸೇರಿದಂತೆ ಸುಮಾರು 25 ಮಸೂದೆಗಳ ಪಟ್ಟಿಯನ್ನು ಅಂಗೀಕಾರಕ್ಕಾಗಿ ಸರ್ಕಾರ ಸಿದ್ಧಪಡಿಸಿದೆ. ಅಧಿವೇಶನದಲ್ಲಿ ಹಣಕಾಸು ಮಸೂದೆಯನ್ನು ಸಹ ಅಂಗೀಕರಿಸಲಾಗುವುದು. ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು, ಇನ್ನು ಮುಂದೆ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕರೋನಾ ವೈರಸ್ಸಿಗಾಗಿ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗುವುದೆಂದು  ರಾಜ್ಯಸಭೆಗೆ (ಮೇಲ್ಮನೆ) ಮಾಹಿತಿ ನೀಡಿದರು. 

ಪ್ರಸ್ತುತ ಅಧಿವೇಶನದಲ್ಲಿ, “ರೈಲ್ವೆ ಸಚಿವಾಲಯದ ಅನುದಾನಕ್ಕಾಗಿ ಬೇಡಿಕೆಗಳು (2020-21)” ಕುರಿತು ರಾಧಾ ಮೋಹನ್ ಸಿಂಗ್ ಮತ್ತು ಸುನಿಲ್ ಕುಮಾರ್ ಮೊಂಡಲ್ ಅವರು ರೈಲ್ವೆ ಸ್ಥಾಯಿ ಸಮಿತಿಯ ವರದಿಯನ್ನು ಮಂಡಿಸಲಿದ್ದಾರೆ. ವಿಮಾನ (ತಿದ್ದುಪಡಿ) ಮಸೂದೆ, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳ ಮಸೂದೆ, ರಾಷ್ಟ್ರೀಯ ಹೋಮಿಯೋಪತಿ ಮಸೂದೆ ಮತ್ತು ಖನಿಜ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಬಾಕಿ ಇರುವ ಮಸೂದೆಗಳ ಪಟ್ಟಿಯಲ್ಲಿ  ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ 2019 ಸೇರಿದ್ದು, ವೈಯಕ್ತಿಕ ದತ್ತಾಂಶದ ಬಳಕೆಯ ವ್ಯಾಪ್ತಿಯ ಮೇಲ್ವಿಚಾರಣೆಗೆ, ಅದು ದತ್ತಾಂಶ ಸಂರಕ್ಷಣಾ ಪ್ರಾಧಿಕಾರವನ್ನು ರೂಪಿಸುತ್ತದೆ.

ನೇರ ತೆರಿಗೆ ವಿವಾದಗಳಿಗೆ ಪರಿಹಾರ ವ್ಯವಸ್ಥೆಯನ್ನು ರೂಪಿಸುವ ನೇರ ತೆರಿಗೆ ‘ವಿವಾದ್  ಸೆ ವಿಶ್ವಾಸ್’ ಮಸೂದೆಯನ್ನು ಅಂಗೀಕರಿಸಲಾಯಿತು. ಸಹಕಾರಿ ಬ್ಯಾಂಕುಗಳನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಹೆಚ್ಚಿನ ಅಧಿಕಾರವನ್ನು ಒದಗಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ (ಕೆಳಮನೆ) ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020 ಅನ್ನು ಮಂಡಿಸಿದರು. ವೃತ್ತಿಪರತೆಯನ್ನು ಹೆಚ್ಚಿಸಿ, ಬಂಡವಾಳದ ಲಭ್ಯತೆಯನ್ನು ಸುಗಮಗೊಳಿಸಿ, ಆಡಳಿತವನ್ನು ಸುಧಾರಿಸಿ  ಮತ್ತು RBI ಮೂಲಕ ಸ್ವಸ್ಥ ಬ್ಯಾಂಕಿಂಗ್ ಅನ್ನು ಖಾತ್ರಿ ಮಾಡಿಸಿ ಸಹಕಾರಿ ಬ್ಯಾಂಕುಗಳನ್ನು ಬಲಪಡಿಸಲು ಈ ಮಸೂದೆ ಪ್ರಯತ್ನಿಸುತ್ತದೆ. ಮಾರ್ಚ್ 4ರಂದು ಯಾವುದೇ ಚರ್ಚೆಯಿಲ್ಲದೆ ನೇರ ತೆರಿಗೆ ಮಸೂದೆಯು ಅಂಗೀಕೃತವಾಗುವುದಕ್ಕೆ ಕೇಂದ್ರ ಹಣಕಾಸು ಸಚಿವೆ ಕಾರಣವಾದರು. ಪ್ರಸ್ತಾವಿತ ಯೋಜನೆಯಡಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಇಚ್ಛಿಸುವ ತೆರಿಗೆದಾರರು, ಈ ವರ್ಷದ ಮಾರ್ಚ್ 31ರೊಳಗೆ ವಿವಾದದಲ್ಲಿರುವ ಸಂಪೂರ್ಣ ತೆರಿಗೆ  ಮತ್ತು ಶೇಕಡಾ 10 – ರಷ್ಟು ಹೆಚ್ಚುವರಿ ವಿವಾದಿತ ತೆರಿಗೆಯನ್ನು ಪಾವತಿಸಿದರೆ, ಸಂಪೂರ್ಣ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಅನುಮತಿಸಲಾಗುತ್ತದೆ.

ಕಾರ್ಮಿಕ ಸಂಘಗಳ ಪಾತ್ರವನ್ನು ಪುನರ್ ವ್ಯಾಖ್ಯಾನಿಸುವ ಕೈಗಾರಿಕಾ ಸಂಬಂಧ ಸಂಹಿತೆ ಮಸೂದೆಯೂ ಪಟ್ಟಿಯ ಒಂದು ಭಾಗವಾಗಿದೆ. ‘ವಿಮಾನ ಸಚಿವಾಲಯ, 1934’ ತಿದ್ದುಪಡಿ ಮಾಡಲು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ‘ವಿಮಾನ (ತಿದ್ದುಪಡಿ), 2020’  ಮಸೂದೆಯನ್ನು ಮಂಡಿಸಲಿದ್ದಾರೆ. ‘ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957’ ಮತ್ತು ‘ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 2015’ ಅನ್ನು ತಿದ್ದುಪಡಿ ಮಾಡಲು ‘ಖನಿಜ ಕಾನೂನುಗಳ (ತಿದ್ದುಪಡಿ) ಮಸೂದೆ, 2020’  ಅನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಂಡಿಸುತ್ತಾರೆ. ಖನಿಜ ಕಾನೂನುಗಳ ಘೋಷಣೆಯ ಮೂಲಕ ತುರಂತು ಶಾಸನಕ್ಕಾಗಿ ಕಾರಣಗಳನ್ನು ತೋರಿಸುವ ವಿವರಣಾತ್ಮಕ ಹೇಳಿಕೆಯನ್ನು ಅವರು ಮಂಡಿಸಲಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ‘ವೈದ್ಯಕೀಯ ಗರ್ಭಪಾತ (ತಿದ್ದುಪಡಿ), 2020’ ಮಸೂದೆಯನ್ನು ಕೆಳಮನೆಯಲ್ಲಿ ಮಂಡಿಸಿದರು. ಗರ್ಭಧಾರಣೆಯ 20 ವಾರದೊಳಗಿನ  ಗರ್ಭಪಾತಕ್ಕೆ ಒಬ್ಬ ವೈದ್ಯರ ಅಭಿಪ್ರಾಯ ಮತ್ತು 20 ರಿಂದ 24 ವಾರಗಳ ನಡುವಿನ ಗರ್ಭಪಾತಕ್ಕೆ ಇಬ್ಬರು ವೈದ್ಯರ ಅಭಿಪ್ರಾಯ ಸಾಕೆಂಬುದನ್ನು ಮಸೂದೆಯು ಪ್ರಸ್ತಾಪಿಸುತ್ತದೆ .

ಭಾರತದಲ್ಲಿ COVID-19 ಹರಡುವುದನ್ನು ತಡೆಯಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ್ ವರ್ಧನ್ ಗುರುವಾರ ಮೇಲ್ಮನೆಗೆ ತಿಳಿಸಿದರು. ಎಲ್ಲಾ ಪ್ರಮುಖ COVID-19 ಪೀಡಿತ ದೇಶಗಳಿಂದ ಪ್ರಯಾಣದ ಇತಿಹಾಸವನ್ನು ಹೊಂದಿರುವ ಮತ್ತು ಅಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಮತ್ತು ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಇರುವ ಜನರ ಪ್ರಕರಣಗಳ ಬಗ್ಗೆ  ದೇಶಾದ್ಯಂತ ಕ್ರಮಬದ್ಧ ಕಣ್ಗಾವಲು ಪ್ರಾರಂಭಿಸಲಾಗಿದೆ. ಯಾವುದೇ ಸಂದಿಗ್ದ ನಿರ್ವಹಿಸಲು ದೇಶಾದ್ಯಂತ ಮೇಲ್ದರ್ಜೆಯ ಸೌಲಭ್ಯವುಳ್ಳ ದೊಡ್ಡ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆಯಾಗಿದೆ. ಈ ಸನ್ನಿವೇಶದ ಬೆಳವಣಿಗೆಗಳ ಬಗ್ಗೆ ಅಗಿಂದಾಗಿನ ಮಾಹಿತಿ ಪಡೆಯಲು ಭಾರತ ಸರ್ಕಾರ WHO ಪ್ರಧಾನ ಕಚೇರಿ, ಪ್ರಾದೇಶಿಕ ಕಚೇರಿ ಮತ್ತು ದೇಶದ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ. ನಿಗಾ, ಪ್ರಯೋಗಾಲಯ ರೋಗಪತ್ತೆ, ಆಸ್ಪತ್ರೆಯ ಸನ್ನದ್ಧತೆ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆ, ಆರೋಗ್ಯ ಸಿಬ್ಬಂದಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸಮುದಾಯಕ್ಕೆ ಅಪಾಯದ ಅರಿವು ಮೂಡಿಸುವುದು – ಈ ಎಲ್ಲಾ   ಒಳಗೊಂಡಿರುವ ರೋಗ ಸಿದ್ಧತೆ ಮತ್ತು ಪ್ರತಿಕ್ರಿಯೆಗಾಗಿ ಪ್ರಮುಖ ಸಾಮರ್ಥ್ಯಗಳನ್ನು ಅನುಸರಿಸುವುದರ ಮೇಲೆ ನಮ್ಮ ಗಮನವಿದೆ ಎಂದು ಸಚಿವರು ಹೇಳಿದರು. ಪ್ರಪಂಚದಾದ್ಯಂತದ COVID-19ರ ಬೆಳವಣಿಗೆಯ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಆಚರಣೆಯ ಪ್ರಮಾಣ ಮತ್ತು ವ್ಯಾಪ್ತಿ ಹೆಚ್ಚಾಗಿದೆ.

 

ಲೇಖನ: ಯೋಗೇಶ್ ಸೂದ್ , ಪತ್ರಕರ್ತ