ಭಯೋತ್ಪಾದನೆ ಬಗೆಗಿನ ಪಾಕಿಸ್ತಾನದ ದ್ವಿಮುಖ ನೀತಿ ಬಹಿರಂಗ

ತನ್ನ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳ ಜೊತೆ ವ್ಯವಹರ ನಡೆಸುತ್ತಿರುವ ಪಾಕಿಸ್ತಾನ ಸರ್ಕಾರದ ದ್ವಂದ್ವ ನಿಲುವು ಎಲ್ಲರಿಗೂ ಗೊತ್ತಿರುವ ವಿಷಯ‌. ಪ್ಯಾರಿಸ್ ನ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಸಮಾವೇಶಕ್ಕೂ‌ ಮೊದಲು ಪಾಕಿಸ್ತಾನವು ಜಾಗತಿಕ ಭಯೋತ್ಪಾದಕ ಮಸೂದ್ ಅಜರ್ ಬಗ್ಗೆ ಸಂಪೂರ್ಣವಾಗಿ ಸುಳ್ಳು ಹೇಳಿರುವುದರಿಂದ ಅದರ ನಿಲುವು ಮತ್ತೊಮ್ಮೆ ಬಹಿರಂಗವಾಗಿದೆ‌. ಭಯೋತ್ಪಾದನಾ‌ ಕೃತ್ಯದ ಮಾಸ್ಟರ್-ಮೈಂಡ್ ಪಾಕಿಸ್ತಾನದಲ್ಲಿ ಅಧಿಕೃತವಾಗಿ ರಕ್ಷಣೆ ಪಡೆದುಕೊಂಡಿದ್ದಾನೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ಜಗತ್ತಿಗೆ ತೋರಿಸಲು ಇಸ್ಲಾಮಾಬಾದ್ ಪ್ರಯತ್ನಿಸುತ್ತಿದೆ; ಆದರೆ ವಾಸ್ತವದಲ್ಲಿ ಇದು ಮಸೂದ್ ಅಜರ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹಮಾನ್ ಲಖ್ವಿ ಮತ್ತು ಜಾಗತಿಕವಾಗಿ ಭಯೋತ್ಪಾದಕ ದಾಳಿಗೆ ಕಾರಣರಾದ ಅನೇಕ ಭಯೋತ್ಪಾದಕರನ್ನು ವಿಚಾರಣೆ ಮಾಡಿ ಸೂಕ್ತ ದಂಡ ವಿಧಿಸುತ್ತಿಲ್ಲ‌.
ಮಸೂದ್ ಅಜರ್ ಜೈಶ್-ಎ-ಮೊಹಮ್ಮದ್ (ಜೆಎಎಂ) ಮುಖ್ಯಸ್ಥನಾಗಿದ್ದು 2019ರ ಫೆಬ್ರವರಿ 14ರಂದು ನಡೆದ ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪದನಾ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ. ಈ ದಾಳಿಯಲ್ಲಿ ಭಾರತದ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಸೈನಿಕರು ಕೊಲ್ಲಲ್ಪಟ್ಟಿದ್ದರು. 2019ರ ಫೆಬ್ರವರಿ 26ರಂದು ಭಾರತವು ಬಾಲಕೋಟ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಕಚೇರಿ ಮತ್ತು ತರಬೇತಿ ಕೇಂದ್ರನ್ನು ನಾಶಪಡಿಸಿತ್ತು. ಅಂದಿನಿಂದ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಮೇಲೆ ಒತ್ತಡ ಹೇರಲಾಗುತ್ತಿತ್ತು. ಯುನೈಟೆಡ್ ಸ್ಟೇಟ್ಸ್, ಯುಕೆ ಮತ್ತು ಫ್ರಾನ್ಸ್ ಜಂಟಿ ಕ್ರಮ ಪ್ರಾಯೋಜಿಸಿದವು, ಆದರೆ ಪಾಕಿಸ್ತಾನ ಮತ್ತು ಚೀನಾ ಎಡವಿದವು. ಅಂತಿಮವಾಗಿ ಮಸೂದ್ ನನ್ನು 2019ರ ಮೇ 1ರಂದು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಯಿತು. ಆದರೂ ಪಾಕಿಸ್ತಾನ ಬಹಿರಂಗವಾಗಿ ಅಥವಾ ರಹಸ್ಯವಾಗಿ ಮಸೂದ್ ನನ್ನು ರಕ್ಷಿಸುತ್ತಿದೆ.
ಕೆಲವೇ ದಿನಗಳ ಹಿಂದೆ ನಡೆದ ಎಫ್‌ಎಟಿಎಫ್ ಸಮಗ್ರ ಸಭೆಗೆ ಪಾಕಿಸ್ತಾನವು ಮಸೂದ್ ಕಾಣೆಯಾಗಿದ್ದಾನೆ, ಆತನನ್ನು ಪತ್ತೆಹಚ್ಚಿಲ್ಲ ಎಂದು ಹೇಳಿತ್ತು. ಇನ್ನೊಂದು ಬೆಳವಣಿಗೆಯಲ್ಲಿ ಬಹಳ ತಡವಾಗಿ ಜಮಾಅತ್-ಉದ್-ದವಾ (ಜುಡಿ) ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಐದಾರು ವರ್ಷ ಜೈಲಿಗೆ ಹಾಕಿತು. ಈ ಎರಡು ಕ್ರಿಯೆಗಳು  ನಡೆದ ಸಮಯವು ತೀವ್ರ ವಿವಾದವನ್ನು ಸೃಷ್ಡಿಸಿವೆ. ಇದರಿಂದ ಎಫ್‌ಎಟಿಎಫ್ ‘ಕಪ್ಪು ಪಟ್ಟಿ’ಗೆ ಸೇರುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂಬ ಗುಮಾನಿ ಪ್ರಬಲವಾಗಿ‌ ಕೇಳಿಬರುತ್ತಿದೆ.
ಎಫ್‌ಎಟಿಎಫ್ ಸಮಗ್ರ ಸಭೆಗೂ ಮುನ್ನ ಮಸೂದ್ ಕಣ್ಮರೆಯಾಗಿರುವುದು ಅಥವಾ ಹಫೀಜ್ ಸಯೀದ್‌ಗೆ ಜೈಲು ಶಿಕ್ಷೆ ವಿಧಿಸಿರುವುದು ಪಾಕಿಸ್ತಾನದ ನಡೆಗಳ ಬಗ್ಗೆ ಅನುಮಾನ ಮೂಡಿಸಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಸಹಾಯ ಮಾಡಿದ ಆರೋಪದ ಮೇರೆಗೆ 2018ರ ಜೂನ್‌ನಿಂದ ಇಸ್ಲಾಮಾಬಾದ್ ಅನ್ನು ‘ಬೂದು ಪಟ್ಟಿ’ಗೆ ಸೇರಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳಲು ಕಾರ್ಯಪಡೆಯಿಂದ 27 ಅಂಶಗಳನ್ನೊಳಗೊಂಡ ‘ಕ್ರಿಯಾ ಯೋಜನೆ’ ಪಟ್ಟಿ ನೀಡಲಾಗಿತ್ತು. 2020ರ ಫೆಬ್ರವರಿಯ ಸಮಗ್ರ ಸಭೆ ನೀಡಿದ್ದ  27 ಅಂಶಗಳ ಕ್ರಿಯಾ ಯೋಜನೆಯಲ್ಲಿ ಪಾಕಿಸ್ತಾನ 14 ಅಂಶಗಳ ಮೇಲೆ ಮಾತ್ರ ಕ್ರಮ ಕೈಗೊಂಡಿದೆ. ಉಳಿದ ಅಂಶಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಇಸ್ಲಾಮಾಬಾದ್‌ಗೆ ತಿಳಸಲಾಗಿದ್ದು ಇಲ್ಲದಿದ್ದರೆ ಅದು ಕಪ್ಪು ಪಟ್ಟಿಗೆ ಸೇರಲಿದೆ. ಇದರರ್ಥ  ಐಎಂಎಫ್, ವಿಶ್ವಬ್ಯಾಂಕ್ ಅಥವಾ ಯುರೋಪಿಯನ್ ಒಕ್ಕೂಟದಿಂದ ಸಹಾಯ ಪಡೆಯಲಾಗದೆ ದೇಶದ ಆರ್ಥಿಕ ಸ್ಥಿತಿ ಹದಗೆಡಲಿದೆ‌.
ಪಾಕಿಸ್ತಾನ ಸರ್ಕಾರವು ಮಸೂದ್ ಅಜರ್ ಕಾಣೆಯಾಗಿದ್ದಾನೆ ಮತ್ತು ಪತ್ತೆಹಚ್ಚಲಾಗಿಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮಗಳು ಆತ ಬಹವಾಲ್ಪುರದ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯ ಹಿಂದೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಭಾರೀ ಭದ್ರತೆಯೊಂದಿಗೆ ಸುರಕ್ಷಿತವಾಗಿದ್ದಾನೆ ಎಂದು ವರದಿ ಮಾಡಿವೆ. ಇದು ಮಸೂದ್ ಅಜರ್ ಇರುವ ಸ್ಥಳದ ಬಗ್ಗೆ ಪಾಕಿಸ್ತಾನದ ನಿಲುವಿಗೆ ವಿರುದ್ಧವಾಗಿದೆ. ಪಾಕಿಸ್ತಾನದ ಖಾಸಗಿ ಟಿವಿ ವಾಹಿನಿ ಯುಎಸ್-ತಾಲಿಬಾನ್ ಒಪ್ಪಂದದ ಕುರಿತು ಮಸೂದ್ ಅಜರ್ ಮಾತನಾಡಿರುವ ಆಡಿಯೊ ಕ್ಲಿಪಿಂಗ್ ಅನ್ನು ಸಹ ಪ್ರಸಾರ ಮಾಡಿದೆ. ಅಜರ್ ಅವರ ವೈಯಕ್ತಿಕ ಸುರಕ್ಷತೆಗಾಗಿ ಸೇನಾ ಗ್ಯಾರಿಸನ್ ಬಳಿಯ ರಾವಲ್ಪಿಂಡಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಇದು ಪಾಕಿಸ್ತಾನ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ವಾಸ್ತವವೆಂದರೆ ಅಜರ್ ಪಾಕಿಸ್ತಾನದಲ್ಲಿಯೇ ಅಧಿಕೃತ ಭದ್ರತಾ ರಕ್ಷಣೆ ಹೊಂದಿದ್ದಾನೆ; ಮತ್ತು ಆತನನ್ನು ಸುರಕ್ಷತೆ ದೃಷ್ಟಿಯಿಂದ‌ ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ.
ಈ ತಂತ್ರ ಅನುಸರಿಸಿ ಪಾಕಿಸ್ತಾನವು ಸದ್ಯಕ್ಕೆ ಎಫ್‌ಎಟಿಎಫ್‌ನ ಕಠಿಣ ಕ್ರಮದಿಂದ ಪಾರಾಗಿದೆ. ಆದರಿದು ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂಬುದನ್ನು ನೋಡಬೇಕು. ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುವ ಇಸ್ಲಾಮಾಬಾದ್‌ನ ದ್ವಿಮುಖ ನೀತಿ ಈಗಾಗಲೇ ಬಹಿರಂಗವಾಗಿದೆ‌. ಅಂತರರಾಷ್ಟ್ರೀಯ ಸಮುದಾಯದೊಂದಿಗೆ ತನ್ನ ಸಂಬಂಧವನ್ನು ಪ್ರಾಮಾಣಿಕವಾಗಿ ಸಾಬೀತುಪಡಿಸಲು‌ ಇದು ಸೂಕ್ತವಾದ ಸಮಯ. ಭಾರತದ ಪುಲ್ವಾಮಾ ಮತ್ತು ಪಠಾಣ್‌ಕೋಟ್ ವಾಯುನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಮಾಸ್ಟರ್ ಮೈಂಡ್ ಗಳನ್ನು ಪಾಕಿಸ್ತಾನ ಶಿಕ್ಷಿಸಬೇಕು ಮತ್ತು ಜಮ್ಮು ಕಾಶ್ಮೀರದ ಗಡಿಯುದ್ದಕ್ಕೂ ಉಗ್ರಗಾಮಿ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇದರಿಂದ ಭಯೋತ್ಪಾದನೆ ವಿರುದ್ಧ ಹೋರಾಡುವ ಇಸ್ಲಾಮಾಬಾದ್‌ನ ಇಚ್ಛಾಶಕ್ತಿ ಗೊತ್ತಾಗಲಿದೆ.
ಸ್ಕ್ರಿಪ್ಟ್: ರತನ್ ಸಾಲ್ಡಿ, ರಾಜಕೀಯ ವಿಶ್ಲೇಷಕ